ತಿರುವನಂತಪುರಂ: ಕೇರಳಂ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸಿದರು. ರಾಜ್ಯಪಾಲ ರಾಜೇಂದ್ರ .ವಿ. ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸಿದರು.
ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಯುಡಿಎಫ್ ಮೈತ್ರಿಕೂಟದ ನಾಯಕರು ಭಾಗವಹಿಸಿದ್ದರು.
ಇದೇ ವೇಳೆ ಸಚಿವರಾಗಿ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ.ಮುರಳೀಧರನ್ ಸೇರಿದಂತೆ 20 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪರಿಶಿಷ್ಟ ಸಮುದಾಯದವರು ಸೇರಿ ಮೊದಲ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 14 ಮಂದಿ ಇದ್ದಾರೆ. ಆರ್‌ಎಸ್‌ಪಿ ಮುಖಂಡ ಶಿಬು ಬೇಬಿ ಜಾನ್, ಕೇರಳ ಕಾಂಗ್ರೆಸ್ ಮುಖಂಡ ಮೋನ್ಸ್ ಜೋಸೆಫ್, ಅನೂಪ್ ಜೇಕಬ್ ಅವರಿಗೂ ಸಚಿವ ಸ್ಥಾನ ಲಭಿಸಿದೆ.
140 ಸದಸ್ಯ ಬಲದ ಕೇರಳಂ ವಿಧಾನಸಭೆಯಲ್ಲಿ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳಲ್ಲಿ ಗೆಲುವು ಗಳಿಸಿದೆ. ಈ ಪೈಕಿ ಕಾಂಗ್ರೆಸ್ 63 ಶಾಸಕರನ್ನು ಹೊಂದಿದೆ. ಮಿತ್ರಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) 22, ಕೇರಳ ಕಾಂಗ್ರೆಸ್ (ಕೆಇಸಿ) ಎಂಟು ಮತ್ತು ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (ಆರ್‌ಎಸ್‌ಪಿ) ಮೂರು ಶಾಸಕರನ್ನು ಹೊಂದಿವೆ.
ಒಂದು ವಾರದ ನಂತರ ಅಳೆದುತೂಗಿ ಕಾಂಗ್ರೆಸ್ ವಿಡಿ ಸತೀಶನ್ ಅವರನ್ನು ಶಾಸಕಾಂಗ ಪಕ್ಷ ನಾಯಕರನಾಗಿ ಆಯ್ಕೆ ಮಾಡಿತ್ತು. ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಸತೀಶನ್, ರಮೇಶ್ ಚನ್ನಿತ್ತಲ ಮತ್ತು ಕೆ ಸಿ ವೇಣುಗೋಪಾಲ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.