ತಿರುವನಂತಪುರ: ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಿ, ಮಹಾತ್ಮಾ ಗಾಂಧಿ ನರೇಗಾ ಕಾಯ್ದೆಯನ್ನೇ ಮರು ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕೇರಳ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಶಬರಿಮಲೆ ಚಿನ್ನ ಕಳವು ಪ್ರಕರಣ ಕುರಿತು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರತಿಭಟನೆ ನಡೆಸಿತು. ಇದರ ಬೆನ್ನಲ್ಲೇ ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ. ರಾಜೇಶ್ ‘ವಿಬಿಜಿ ಜಿ ರಾಮ್ ಜಿ’ಕಾಯ್ದೆಯನ್ನು ವಿರೋಧಿಸಿ ನಿರ್ಣಯ ಮಂಡಿಸಿದರು. ನಂತರ ಸದನವು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತು.
ಸಚಿವ ಎಂ.ಬಿ. ರಾಜೇಶ್ ಮಾತನಾಡಿ, ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ಮನರೇಗಾ) ಕಾಯ್ದೆಯನ್ನು ಬದಲಾಯಿಸಿ ಹೊಸದಾಗಿ ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ (ವಿಬಿ– ಜಿ ರಾಮ್ ಜಿ) ಕಾಯ್ದೆಯನ್ನು ಜಾರಿಗೊಳಿಸಿದೆ. ಹೊಸ ಯೋಜನೆ ಪ್ರಕಾರ ರಾಜ್ಯ ಸರ್ಕಾರಗಳು ಶೇ. 40ರಷ್ಟು ವೆಚ್ಚವನ್ನು ಭರಿಸಬೇಕಿದೆ. ಇದರಿಂದ ರಾಜ್ಯಗಳಿಗೆ ಆರ್ಥಿಕ ಮುಗ್ಗಟ್ಟು ಎದುರಾಗಲಿದೆ. ಹೊಸ ಕಾಯ್ದೆಯನ್ನು ವಿರೋಧಿಸುತ್ತಿರುವ ಇತರ ದಕ್ಷಿಣ ರಾಜ್ಯಗಳ ಜತೆ ಕೇರಳ ಕೈಜೋಡಿಸಲಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಬಡತನ ನಿರ್ಮೂಲನೆಗೆ ಯಾವುದೇ ಸಹಾಯಕವಾಗದ ಮತ್ತು ರಾಜ್ಯಗಳ ಮೇಲೆ ಉದ್ಯೋಗ ಒದಗಿಸುವ ಹೊರೆಯನ್ನು ನಿಗದಿಪಡಿಸುವ ಹೊಸ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ಹಿಂದಿನ ಮನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಬೇಕೆಂದು ಸದನವು ಒತ್ತಾಯಿಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಕರ್ನಾಟಕ ಮತ್ತು ತೆಲಂಗಾಣ ಕಾಂಗ್ರೆಸ್ ಸರ್ಕಾರಗಳು ಮತ್ತು ತಮಿಳುನಾಡಿನ ಡಿಎಂಕೆ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಬೇಕೆಂದು ಒತ್ತಾಯಿಸಿ ನಿರ್ಣಯ ಮಂಡಿಸಿವೆ.