2026-03-07 05:11:09

Union Minister Kumaraswamys Efforts | ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಯತ್ನದ ಫಲ ತಂಬಾಕು ಮೇಲೆ ವಿಧಿಸಲಾಗಿದ್ದ ಶೇ 18ರಷ್ಟು ಅಬಕಾರಿ ಸುಂಕ ರದ್ದು | Speed News Kannada

Union Minister Kumaraswamys Efforts | ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಯತ್ನದ ಫಲ ತಂಬಾಕು ಮೇಲೆ ವಿಧಿಸಲಾಗಿದ್ದ ಶೇ 18ರಷ್ಟು ಅಬಕಾರಿ ಸುಂಕ ರದ್ದು | Speed News Kannada

ನವದೆಹಲಿ: ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಯತ್ನದ ಫಲವಾಗಿ ಎಫ್‌ʼಸಿವಿ ತಂಬಾಕು ಮೇಲೆ ವಿಧಿಸಲಾಗಿದ್ದ ಶೇ. 18ರಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರಕಾರ ತೆಗೆದು ಹಾಕಿದೆ.
ಈ ತಂಬಾಕಿನ ಮೇಲೆ ಶೇ. 18ರಷ್ಟು ಅಬಕಾರಿ ಸುಂಕ ವಿಧಿಸಿದ್ದರಿಂದ ಖರೀದಿದಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ದೂರವೇ ಉಳಿದಿದ್ದರು. ಇದರಿಂದ ಬೆಳೆದ ಬೆಳೆ ಮಾರಾಟವಾಗದೆ ರಾಜ್ಯದ ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ. ಕೋಟೆ, ಅರಕಲಗೂಡು ಸೇರಿದಂತೆ ವಿವಿಧ ಭಾಗಗಳಲ್ಲಿನ ತಂಬಾಕು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು.
ತಂಬಾಕು ಬೆಳೆಗಾರರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಸಂಕಷ್ಟ ತೋಡಿಕೊಂಡಿದ್ದರು. ಈ ಸಂಬಂಧ ಸಚಿವರು ಬೆಂಗಳೂರಿನ ತಂಬಾಕು ಮಂಡಳಿ ವ್ಯಸ್ಥಾಪಕ ನಿರ್ದೇಶಕರು ಮತ್ತು ವಿಶಾಖಪಟ್ಟಣ ವಿಭಾಗದ ಕೇಂದ್ರೀಯ ಅಬಕಾರಿ ಮತ್ತು ಜಿಎಸ್ಟಿ ಮುಖ್ಯ ಆಯುಕ್ತರ ಜತೆ ನಡೆಸಲಾಗಿದ್ದ ಪತ್ರ ವ್ಯವಹಾರಗಳ ಕುರಿತ ಎಲ್ಲಾ ಮಾಹಿತಿಯನ್ನೂ ಪಡೆದುಕೊಂಡಿದ್ದರು.
ನಂತರ ಸಚಿವರು ಈ ವಿಷಯವನ್ನು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರ ಗಮನಕ್ಕೆ ತಂದು, ತಂಬಾಕು ಮೇಲಿನ ಅಬಕಾರಿ ಸುಂಕವನ್ನು ರದ್ದು ಮಾಡಬೇಕು ಎಂದು ವಿನಂತಿಸಿದ್ದರು. ತಕ್ಷಣವೇ ಸ್ಪಂದಿಸಿರುವ ವಿತ್ತ ಸಚಿವರು, ತಂಬಾಕು ಮೇಲಿನ ಅಬಕಾರಿ ಸುಂಕ ವಿನಾಯಿತಿ ನಿರ್ಧಾರವನ್ನು ಕೈಗೊಂಡಿದ್ದಾರೆ.
ಈ ಸಂಬಂಧ ಫೆಬ್ರವರಿ 1ರಂದು ಆದೇಶ ಹೊರಡಿಸಿರುವ ತಂಬಾಕು ಮಂಡಳಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಬಕಾರಿ ಸುಂಕವನ್ನು ಹಿಂಪಡೆಯಲಾಗಿದೆ ಹಾಗೂ  ಫೆಬ್ರವರಿ 5ರಿಂದಲೇ ಹರಾಜು ಪ್ರಕ್ರಿಯೆ ಆರಂಭ ಮಾಡುವಂತೆ ನಿರ್ದೇಶನ ನೀಡಿದೆ. 
ವಿತ್ತ ಸಚಿವರಿಗೆ ಎಚ್‌ ಡಿಕೆ ಧನ್ಯವಾದ:
ತಂಬಾಕು ಹರಾಜು ವಿಷಯಕ್ಕೆ ಸಂಬಂಧಿಸಿ ತಮ್ಮ ಮನವಿಗೆ ಸ್ಪಂದಿಸಿ ಬೆಳೆಗಾರರ ಪರವಾಗಿ ಕ್ರಮ ವಹಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಚಿವ ಕುಮಾರಸ್ವಾಮಿ ಅವರು ಧನ್ಯವಾದ ತಿಳಿಸಿದ್ದಾರೆ. 
ಏನಿದರ ಹಿನ್ನೆಲೆ?: 
ತಂಬಾಕು ಮೇಲೆ ಅಬಕಾರಿ ಸುಂಕ ಮತ್ತು ಜಿಎಸ್‌ಟಿ ದರ ಏರಿಕೆ ವಿರೋಧಿಸಿ ತಂಬಾಕು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ಖರೀದಿ ಕಂಪನಿಗಳು ನಿರ್ಧರಿಸಿದ್ದವು. ಇದರಿಂದ ಹರಾಜು ಪ್ರಕ್ರಿಯೆ ಸ್ಥಗಿತಗೊಂಡು ಮಾರುಕಟ್ಟೆ ಬಂದ್ ಆಗಿದ್ದವು. ರೈತರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದರು.
ಖರೀದಿ ಕಂಪನಿಗಳು ತಮ್ಮ ಮೇಲೆ ವಿಧಿಸಿರುವ ಅನುತ್ಪಾದಕ ತಂಬಾಕಿಗೆ ಅಬಕಾರಿ ಸುಂಕ ಹಾಗೂ ತಂಬಾಕು ಉತ್ಪನ್ನಗಳಿಗೆ ಜಿಎಸ್‌ಟಿ ಏರಿಕೆಯ ಹಿನ್ನಲೆಯಲ್ಲಿ ತಂಬಾಕು ಖರೀದಿ ಕಂಪನಿಗಳು ತಾತ್ಕಾಲಿಕವಾಗಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿವೆ. ಇದರಿಂದಾಗಿ ಮಾರುಕಟ್ಟೆ ಬಂದ್ ಆಗಿದ್ದು, ರೈತರು ಕಷ್ಟಪಟ್ಟು ಬೆಳೆದ ತಂಬಾಕು ಒಣಗುತ್ತಿದೆ. ದಿನದಿನಕ್ಕೂ ಬೆಲೆ ಈಲಿಮುಖವಾಗುತ್ತುದೆ. ಈ ನಡುವೆ ಹರಾಜು ಪ್ರಕ್ರಿಯೆಯಲ್ಲಿ ತಾತ್ಕಾಲಿಕವಾಗಿ ಭಾಗವಹಿಸುವುದಿಲ್ಲವೆಂದು ಖರೀದಿದಾರರು ಘೋಷಿಸಿದ್ದರು. ಬೆಳೆಗಾರರು ತೊಂದರೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಸಚಿವ ಕುಮಾರಸ್ವಾಮಿ ಅವರು ಮಧ್ಯ ಪ್ರವೇಶಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.