2026-06-08 02:42:15

Today is World Social Justice Day | ಇಂದು ವಿಶ್ವ ಸಾಮಾಜಿಕ ನ್ಯಾಯ ದಿನ: ಸಮಸಮಾಜಕ್ಕಾಗಿ ಶ್ರಮಿಸೋಣ ಎಂದ ಸಿಎಂ ಸಿದ್ದರಾಮಯ್ಯ | Speed News Kannada

Today is World Social Justice Day | ಇಂದು ವಿಶ್ವ ಸಾಮಾಜಿಕ ನ್ಯಾಯ ದಿನ: ಸಮಸಮಾಜಕ್ಕಾಗಿ ಶ್ರಮಿಸೋಣ ಎಂದ  ಸಿಎಂ ಸಿದ್ದರಾಮಯ್ಯ | Speed News Kannada

ಬೆಂಗಳೂರು: ಇಂದು ಆಚರಿಸಲಾಗುತ್ತಿರುವ ವಿಶ್ವ ಸಾಮಾಜಿಕ ನ್ಯಾಯದ ದಿನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶೂಭಾಶಯ ಕೋರಿದ್ದಾರೆ. 
ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ. ಕನ್ನಡ ನೆಲದಲ್ಲಿ ಬಸವಾದಿ ಶರಣರಿಂದ ಆರಂಭವಾದ ಸಾಮಾಜಿಕ ನ್ಯಾಯದ ಚಳವಳಿಯನ್ನು ಬಳಿಕ ಸರ್ವಜ್ಞ, ಸೂಫಿ ಸಂತರು, ನಾರಾಯಣ ಗುರು, ಕನಕದಾಸರು ಸೇರಿದಂತೆ ಹಲವಾರು ಸಮಾಜ ಸುಧಾರಕರು ಮುಂದುವರಿಸಿಕೊಂಡು ಬಂದಿದ್ದಾರೆ. ಬಾಬಾ ಸಾಹೇಬರು ಈ ಆಶಯಗಳಿಗೆ ಸಾಂವಿಧಾನಿಕ ರಕ್ಷಣೆ ನೀಡಿ, ಕಾನೂನಿನ ಬಲ ತುಂಬಿದ್ದಾರೆ. ಆದರೂ ಇಂದಿಗೂ ಅಸಮಾನತೆ, ಶೋಷಣೆಗಳು ಜೀವಂತವಾಗಿವೆ.
ಜಾತಿ, ಧರ್ಮ, ಲಿಂಗ, ಭಾಷೆ, ಬಣ್ಣ ಈ ಯಾವುದರ ಮೇಲೂ ತಾರತಮ್ಯ ಮಾಡದೆ, ಪ್ರತಿ ವ್ಯಕ್ತಿಗೂ ಸಮಾನ ಅವಕಾಶ, ಹಕ್ಕುಗಳನ್ನು ನೀಡುವುದೇ ಸಾಮಾಜಿಕ ನ್ಯಾಯ. ಇದಕ್ಕಾಗಿಯೇ ನನ್ನ ನಾಲ್ಕು ದಶಕಗಳ ರಾಜಕೀಯ ಜೀವನವನ್ನು ಮುಡಿಪಿಟ್ಟಿದ್ದೇನೆ, ನನ್ನ ಕೊನೆಯ ಉಸಿರಿರುವವರೆಗೂ ಅವಕಾಶ ವಂಚಿತ ಜನರ ಪರವಾಗಿಯೇ ನಿಲ್ಲುತ್ತೇನೆ ಎಂದಿದ್ದಾರೆ. ವಿಶ್ವ ಸಾಮಾಜಿಕ ನ್ಯಾಯದ ದಿನವಾದ ಇಂದು ಸಾಮಾಜಿಕ ನ್ಯಾಯದ ಬಂಡಿಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಸಂಕಲ್ಪಗೈಯ್ಯೋಣ. ಸಮಸಮಾಜಕ್ಕಾಗಿ ಜೊತೆಗೂಡಿ ಶ್ರಮಿಸೋಣ ಎಂದಿದ್ದಾರೆ. ಸಮಾಜ ಕಲ್ಯಾಣ ಸಚಿವ ಡಾ ಎಚ.ಸಿ.ಮಹದೇವಪ್ಪ ಅವರು ತಮ್ಮ ಸಂದೇಶದಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆಯು ಬಹುಕಾಲದಿಂದ ಅಸ್ತಿತ್ವದಲ್ಲಿ ಇದ್ದರೂ ಕ್ರಮೇಣ ಅದು ಜಾರಿಗೆ ಬರಲು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತವರ ಸಂವಿಧಾನವೇ ಬರಬೇಕಾಯಿತು.
ನ್ಯಾಯ ಎಂಬುದು ಸಹಜವಾದ ನಿರೀಕ್ಷೆಯೇ ಆಗಿದ್ದರೂ ಸಹ ಅದನ್ನು ಪಡೆಯಲು ಹೋರಾಟ ನಡೆಸಬೇಕಾದ ಅನಿವಾರ್ಯ ಜಗತ್ತಿನ ಮುಂದೆ ಇದೆ.
ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ನ್ಯಾಯವು ಸಮಾಜವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ ಮತ್ತು ಅದು ಆರೋಗ್ಯಕರ ಸಮಾಜದ ಸೂಚನೆಯೂ ಹೌದು. ಹೀಗಾಗಿ ವಿಶ್ವ ಸಾಮಾಜಿಕ ನ್ಯಾಯದ ಈ ದಿನ ನಾವೆಲ್ಲರೂ ಜಾಗೃತರಾಗೋಣ, ಮಹನೀಯರು ಕೊಟ್ಟ ನ್ಯಾಯದ ರಥವನ್ನು ಎಳೆಯೋಣ ಎಂದು ಕರೆ ನೀಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.