2026-06-08 01:20:39

ಕುರ್ಚಿ ಉಳಿಸಿಕೊಳ್ಳಲು ತುಮಕೂರಿನಲ್ಲಿ ಸಮಾವೇಶ: ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ವಾಗ್ದಾಳಿ|Speed News Kannada

ಕುರ್ಚಿ ಉಳಿಸಿಕೊಳ್ಳಲು ತುಮಕೂರಿನಲ್ಲಿ ಸಮಾವೇಶ: ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ವಾಗ್ದಾಳಿ|Speed News Kannada

ಬೆಂಗಳೂರು: ತುಮಕೂರಿನಲ್ಲಿ ಸಾಧನಾ ಸಮಾವೇಶ ಆಯೋಜಿಸಿರುವುದು ಯಾವ ಪುರುಷಾರ್ಥಕ್ಕೆ?. ಈ ಮೂರು ವರ್ಷದಲ್ಲಿ ಸರ್ಕಾರ ಕಡಿದು ಕಟ್ಟೆ ಹಾಕಿದ್ದು ಏನು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯ ಯೋಜನೆಗಳನ್ನು ತಮ್ಮ ಸರ್ಕಾರದ ಯೋಜನೆಗಳು ಎಂದು ಈಗಿನ ಕಾಂಗ್ರೆಸ್ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ತುಮಕೂರಿನಲ್ಲಿ ಮತ್ತು ಈ ಹಿಂದೆ ಹುಬ್ಬಳ್ಳಿಯಲ್ಲಿ ಭಾರಿ ಸಂಖ್ಯೆಯಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಈ ಸರ್ಕಾರ ಆಯೋಜಿಸಿತ್ತು. ಇದು ಬಿಜೆಪಿ ಸರ್ಕಾರದ ಯೋಜನೆ. ಹಳೆ ಸರ್ಕಾರದ ಕೆಲಸಗಳನ್ನು ತಮ್ಮ ಕೆಲಸ ಎಂದು ಜನರಿಗೆ ತೋರಿಸುತ್ತಿದ್ದಾರೆ. ತುಮಕೂರು ಸಮಾವೇಶ ನಗೆಪಾಟಲಿಗೀಡಾಗಿದೆ ಎಂದರು.

ಏನಾದರೂ ಸಾಧನೆ ಮಾಡಿದ್ದರೆ ಬಾಗಲಕೋಟೆ ಮತ್ತು ದಾವಣಗೆರೆ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳು ಹಲವು ದಿನ ಬೀಡು ಬಿಡಬೇಕಾದ ಪರಿಸ್ಥಿತಿ ಇರುತ್ತಿರಲಿಲ್ಲ. ಮತದಾನಕ್ಕೂ ಮೂರು ದಿನ ಮೊದಲು ಗೃಹಲಕ್ಷ್ಮಿ ಹಣ ನೀಡಿದ್ದಾರೆ. ಜಾಹೀರಾತು ಮೂಲಕ ಆರ್ಥಿಕ ಮತ್ತು ಕಾನೂನು ಸ್ಥಿತಿ ಚೆನ್ನಾಗಿದೆ ಎಂದು ಜನರಿಗೆ ತೋರಿಸುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಸಮಾವೇಶದ ಮೂಲಕ ಮಾಡುತ್ತಿದ್ದಾರೆ ಎಂದು ಹೇಳಿದರು.

ಪರಿಣಾಮಕಾರಿಯಾದ ವಿರೋಧ ಪಕ್ಷವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಹೋರಾಟ ಮಾಡದೇ ಹೋಗಿದ್ದೇ ಇದ್ದರೆ ವಾಲ್ಮೀಕಿ ಹಗರಣದಲ್ಲಿ ಸಚಿವರು ರಾಜೀನಾಮೆ ನೀಡುತ್ತಿರಲಿಲ್ಲ. ಈ ಸರ್ಕಾರಕ್ಕೆ ಭಂಡತನವಿದೆ. ಏನೇ ನಾವು ಹೋರಾಟ ಮಾಡಿದರೆ ತಾಗುವುದಿಲ್ಲ. ಈ ಭಂಡತನವನ್ನು ರಾಜ್ಯದ ಜನ ನೋಡುತ್ತಿದ್ದಾರೆ. ನಾವು ಸಮಯಕ್ಕೆ ಸರಿಯಾಗಿ ಹೋರಾಟ ಮಾಡುತ್ತಿದ್ದೇವೆ. ಈ ಆಟ ಬಹಳ ದಿನ ನಡೆಯುವುದಿಲ್ಲ ಎಂದರು.

ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಮಾವೇಶ:

ಮುಖ್ಯಮಂತ್ರಿ ಕುರ್ಚಿಗೆ ಕಾಳಗ ನಡೆಯುತ್ತಿದ್ದು ಕೋಟಿ ಕೋಟಿ ಹಣ ಪೋಲು ಮಾಡಿ ತುಮಕೂರು ಸಮಾವೇಶ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ಸಮಾವೇಶ ಮಾಡುತ್ತಿದ್ದಾರೆ. ಇವರ ಸಾಧನೆ ಏನೂ ಇಲ್ಲ. ಕುರ್ಚಿ ಪೈಪೋಟಿಯಿಂದಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಹೋಗಿದೆ ಎಂದು ಹೇಳಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.