2026-06-08 01:28:17

ತನ್ನ ವೈಫಲ್ಯ ಮುಚ್ಚಿಕೊಳ್ಳಲು ಎಸ್‌ ಐಆರ್‌ ಬಗ್ಗೆ ಅಪಪ್ರಚಾರ; ಕಾಂಗ್ರೆಸ್‌ ವಿರುದ್ಧ ಕುಮಾರಸ್ವಾಮಿ ಆರೋಪ‌| Speed News Kannada

ತನ್ನ ವೈಫಲ್ಯ ಮುಚ್ಚಿಕೊಳ್ಳಲು ಎಸ್‌ ಐಆರ್‌ ಬಗ್ಗೆ ಅಪಪ್ರಚಾರ; ಕಾಂಗ್ರೆಸ್‌ ವಿರುದ್ಧ ಕುಮಾರಸ್ವಾಮಿ ಆರೋಪ‌| Speed News Kannada

ಬೆಂಗಳೂರು: ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್‌ ಈ ಕುತಂತ್ರ ನಡೆಸುತ್ತಿದೆ ಎಂದರು.

ಕೆಲವು ದಿನ ಮಹಾತ್ಮಾ ಗಾಂಧಿ ನರೇಗಾ ಕುರಿತು ಅಪಪ್ರಚಾರ ನಡೆಸಿದರು. ಈಗ ಎಸ್'ಐಆರ್ ಕುರಿತು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಜನ ಇವರಿಗೆ ಕೆಲಸ ಮಾಡಲು ಅವಕಾಶ ಕೊಟ್ಟರು. ಆದರೆ‌ ಇವರಿಗೆ ಕೆಲಸ ಮಾಡುವ ಮನೋಭಾವ ಇಲ್ಲ. ಬೇಡದ ವಿಷಯಗಳನ್ನು ಕುರಿತು ಚರ್ಚಚೆ ಮಾಡುತ್ತಿದ್ದಾರೆ ಎಂದರು.

ಬಿಡದಿ ಚರ್ಚೆಗೆ ಕರೆದವರು ವಸೂಲಿಯಲ್ಲಿ ಬ್ಯುಸಿ ಇದ್ದಾರೆ!:

ಬಿಡದಿ ಟೌನ್ ಶಿಪ್ ವಿಚಾರವಾಗಿ ಬಹಿರಂಗ ಚರ್ಚೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೊದಲು ಬಿಡದಿ ಟೌನ್ ಶಿಪ್ ಬಗ್ಗೆ ಚರ್ಚೆಗೆ ಆಹ್ವಾನ ಕೊಟ್ಟಿದ್ದು‌ ಅವರು. ಅದಕ್ಕೆ ನಾನು ಸಿದ್ಧ ಎಂದು ಹೇಳಿದ್ದೇನೆ. ಪಾಪ ಅವರು ತುಂಬಾ ಬ್ಯುಸಿ‌ ಇದ್ದಾರೆ. ಮೀಟರ್ ಲೆಕ್ಕ ಹಾಕೋದು, ರೇಟ್ ಫಿಕ್ಸ್ ಮಾಡೋದು ಅವರ ಕೆಲಸ. ದಿನಕ್ಕೆ ಇಷ್ಟು ವಸೂಲಿ ಆಗಬೇಕೆಂದು ಫಿಕ್ಸ್ ಮಾಡಿಕೊಂಡು ಜೀವನ ಮಾಡುವವರು ಅವರು. ಹೀಗಾಗಿ ಅವರು ಒಂದೊಂದು ಸೆಕೆಂಡ್ ಬ್ಯುಸಿ ಇರುತ್ತಾರೆ. ಜನಗಳ ಮುಂದೆ ಚರ್ಚೆ ಮಾಡುವುದಕ್ಕೆ  ನನ್ನದು ಯಾವುದೇ ಅಭ್ಯಂತರ ಇಲ್ಲ ಎಂದು ಕುಟುಕಿದರು.

ಅಕ್ಕಿ ಕೇಂದ್ರದ್ದು, ಪುಕ್ಕಟೆ ಪ್ರಚಾರ ರಾಜ್ಯದ್ದು:

ಕೇಂದ್ರ ಸರಕಾರ ಮುಂಗಡವಾಗಿ ಎರಡು ತಿಂಗಳ ಅಕ್ಕಿ ತೆಗೆದುಕೊಳ್ಳಿ ಎಂದು ಹೇಳಿದೆ. ಆದರೆ ಬಡವರ ಹಸಿವು ನೀಗಿಸೋದು‌ ನಾವು ಎಂದು ಜಾಹೀರಾತು ಕೊಡುತ್ತಿದ್ದಾರೆ. ಕೇಂದ್ರ ಸರಕಾರ ಅಕ್ಕಿ ಕೊಡುತ್ತಿದೆ. ಕೇಂದ್ರ ಕೊಡುತ್ತಿರುವ ಅಕ್ಕಿಯನ್ನು ಹಂಚಿ ಇವರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.

ರಾಜ್ಯದ ಹಲವಾರು ಪ್ರದೇಶದಲ್ಲಿ ಮಳೆ, ‌ಬಿರುಗಾಳಿಯಿಂದ ಬಾಳೆ, ತೆಂಗು ನಾಶ ಆಗಿದೆ. ಎಲ್ಲಾದರೂ ಒಂದು ಕಡೆ ಸರಕಾರದವರು ಹೋಗಿದ್ದಾರ? ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೆ ಕಾಂಗ್ರೆಸ್ಸಿನರು ಕುರ್ಚಿ ಕಿತ್ತಾಟದಲ್ಲಿ ತೊಡಗಿದ್ದಾರೆ. ಜನಕ್ಕಿಂತ ಇವರಿಗೆ ರಾಜಕೀಯವೇ ದೊಡ್ಡದಾಗಿದೆ ಎಂದು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ದೇವೇಗೌಡರು ಮತ್ತೆ ‌ರಾಜ್ಯಸಭೆಗೆ ಆಯ್ಕೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಕುಮಾರಸ್ವಾಮಿ, ಮರು ಆಯ್ಕೆ ಮಾಡುವಂತೆ ನಾವು ಕೇಳಿಲ್ಲ. ಮಿತ್ರಪಕ್ಷ ಬಿಜೆಪಿಗೆ ವಿಧಾನಸಭೆಯಲ್ಲಿ 63 ಸ್ಥಾನ‌ಗಳಿವೆ. ಹೀಗಾಗಿ  ಅವರೇ‌‌ ನಿರ್ಧರಿಸುತ್ತಾರೆ. ನಾನಾಗಲೀ,‌ದೇವೇಗೌಡರಾಗಲೀ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ‌ದೇವೇಗೌಡರ ಅವಶ್ಯಕತೆ ಬಗ್ಗೆ ದೆಹಲಿ‌ ಮಟ್ಟದಲ್ಲಿ ತೀರ್ಮಾನ ಮಾಡಲಿ. ನಾವು ಇನ್ನೊಬ್ಬರಿಗೆ ತಪ್ಪಿಸಿ ನಮಗೆ‌ ಕೊಡಿ ಎಂದು ಕೇಳಲ್ಲ ಎಂದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.