ನವದೆಹಲಿ: ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ 12 ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದ್ದರೂ ಇಂಧನ ಬೆಲೆಯನ್ನು ಏಕೆ ಇಳಿಸಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ದೇಶದಲ್ಲಿ ಇಂಧನ ದರಗಳು ನಿರಂತರವಾಗಿ ಏರಿಕೆಯಾಗುತ್ತಿದ್ದು ಜನಸಾಮಾನ್ಯರಿಗೆ ಹೊರೆಯಾಗಿದೆ. ಕಚ್ಚಾತೈಲ ಬೆಲೆ ಇಳಿಕೆಯಾಗುತ್ತಿದೆ. ಆದರೆ ಅದರ ಲಾಭವನ್ನು ಜನರಿಗೆ ಏಕೆ ನೀಡುತ್ತಿಲ್ಲ ಎಂದೂ ಕೇಳಿದ್ದಾರೆ.
ಇಂದಿಗೆ ಅಂದರೆ 12 ವರ್ಷಗಳ ಹಿಂದೆ, ಅಂದರೆ 2014ರ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡಾಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 108.05 ಡಾಲರ್ ಇತ್ತು. ಆಗ ಡಾಲರ್ ಎದುರು ರೂಪಾಯಿ ಮೌಲ್ಯ ರೂ.58.59 ಇತ್ತು. ಆಗ ದೇಶದಲ್ಲಿ ಪೆಟ್ರೋಲ್ ದರ ಲೀಟರ್‌ಗೆ ರೂ.71.51 ಮತ್ತು ಡೀಸೆಲ್ ದರ ರೂ.56.71 ಇತ್ತು.ಆದರೆ ಇಂದು ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 99 ಡಾಲರ್ ಗಿಂತಲೂ ಕೆಳಗಿದೆ. ಹೀಗಿದ್ದರೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾತ್ರ ಏರಿಕೆಯಾಗುತ್ತತಲೇ ಇದೆ. ಕಚ್ಚಾ ತೈಲ ಅಗ್ಗವಾಗಿದ್ದರೂ ಪೆಟ್ರೋಲ್ ಶೇ. 42.8ರಷ್ಟು ಮತ್ತು ಡೀಸೆಲ್ ಶೇ 67.9ರಷ್ಟು ದುಬಾರಿಯಾಗಿದೆ ಎಂದು ವಿವರಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಪ್ರತಿಯೊಂದರ ಬೆಲೆಯೂ ಹೆಚ್ಚಳವಾಗುತ್ತಲೇ ಇರುತ್ತದೆ. ಸಾರಿಗೆಯಿಂದ ಹೋಟೆಲ್ ತಿಂಡಿ ತಿನಿಸುಗಳ ವರೆಗೆ ಪರಿಣಾಬ ಬೀರುತ್ತದೆ. ಆದರೂ ಸರ್ಕಾರದ ಲಾಭಕೋರತನ ಮಾತ್ರ ಎಗ್ಗಿಲ್ಲದೆ ಮುಂದುವರಿದಿದೆ ಎಂದು ಟೀಕಿಸಿದ್ದಾರೆ.