ಢಾಕಾ: ಬಾಂಗ್ಲಾದೇಶದ ಸಂಸತ್ ಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡಿದ್ದು, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ನೇತೃತ್ವದ ಒಕ್ಕೂಟ ಸ್ಪಷ್ಟಬಹುಮತ ಪಡೆದಿದೆ. ಬಿಎನ್‌ಪಿ ಈಗಾಗಲೇ ಘೋಷಣೆ ಮಾಡಿರುವಂತೆ ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸುಮಾರು ಎರಡು ದಶಕಗಳ ಕಾಲ ಬಾಂಗ್ಲಾದೇಶವನ್ನು ತೊರೆದು ಲಂಡನ್ ನಲ್ಲಿ ವಾಸಿಸುತ್ತಿದ್ದ ತಾರಿಕ್ ರೆಹಮಾನ್, ಸ್ವದೇಶಕ್ಕೆ ಮರಳಿದ ಎರಡು ತಿಂಗಳಲ್ಲೇ ಬಾಂಗ್ಲಾದೇಶದ ಪ್ರಧಾನಿ ಹುದ್ದೆ ಅಲಂಕರಿಸುತ್ತಿದ್ದಾರೆ.
ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವಾಮಿ ಲೀಗ್ ಪಕ್ಷದ ವಿಸರ್ಜನೆಗೊಂಡ ನಂತರ, ಬಿಎನ್‌ಪಿ ಮತ್ತು ಅದರ ಈ ಹಿಂದಿನ ಮಿತ್ರ ಪಕ್ಷ ಜಮಾತ್-ಇ-ಇಸ್ಲಾಮಿ ಪಕ್ಷಗಳ ನಡುವೆ ನೇರ ಹಣಾಹಣಿ ಎದುರಾಗಿತ್ತು.
ಯಾರು ತಾರಿಕ್ ರೆಹಮಾನ್?:
ಬಾಂಗ್ಲಾದ ಮಾಜಿ ಪ್ರಧಾನಿ ಖಲೀದಾ ಮತ್ತು ಬಿಎನ್‌ಪಿ ಸಂಸ್ಥಾಪಕ ಅಧ್ಯಕ್ಷ ಜಿಯಾವುರ್ ರೆಹಮಾನ್ ದಂಪತಿಯ ಪುತ್ರ ತಾರಿಕ್ ರೆಹಮಾನ್. ಢಾಕಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ ಜವಳಿ ಮತ್ತು ಕೃಷಿ ಉತ್ಪನ್ನಗಳ ಮೂಲಕ ವ್ಯವಹಾರ ಪ್ರಾರಂಭಿಸುತ್ತಾರೆ.
2001–2006ರ ಅವಧಿಯಲ್ಲಿ ರೆಹಮಾನ್ ಅವರ ತಾಯಿ ಖಲೀದಾ ಅವರು ಪ್ರಧಾನಿಯಾಗಿದ್ದಾಗ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ, ಬಾಂಗ್ಲಾದೇಶದ ಮಿಲಿಟರಿ ಸರ್ಕಾರವು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು.
ನಂತರ ಅಧಿಕಾರ ಹಿಡಿದ ಶೇಖ್ ಹಸೀನಾ ಆಳ್ವಿಡಳಿತದ ಅವಧಿಯಲ್ಲಿ 2004ರಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ಅನೇಕರ ಸಾವು ನೋವುಗಳಿಗೆ ತಾರಿಕ್ ಕಾರಣ ಎಂದು ಹಸೀನಾ ಆರೋಪಿಸಿದ್ದರು. ನಂತರದ ಬೆಳವಣಿಗೆಗಳಲ್ಲಿ ಹಸೀನಾ ಪದಚ್ಯುತಿಗೊಂಡ ನಂತರ ತಾರಿಕ್ ಮೇಲಿದ್ದ ಎಲ್ಲಾ ಪ್ರಕರಣಗಳು ಖುಲಾಸೆಗೊಂಡಿದ್ದವು.
2024ರ ಅಗಸ್ಟ್‌ನಲ್ಲಿ ಬಿಎನ್‌ಪಿಎದುರಾಳಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಯುವಕರು ದಂಗೆ ಏಳುತ್ತಾರೆ. ಬಳಿಕ ಸರ್ಕಾರ ವಿಸರ್ಜನೆಗೊಂಡು, ಮಧ್ಯಂತರ ಸರ್ಕಾರ ರಚನೆಯಾಗುತ್ತದೆ.
ಸುಮಾರು 20 ವರ್ಷಗಳ ಬಳಿಕ ತಾರಿಕ್ ಅವರು 2025ರ ಕ್ರಿಸ್‌ಮಸ್ ಸಂದರ್ಭದಲ್ಲಿ ಸ್ವದೇಶಕ್ಕೆ ಮರಳಿದ್ದರು.