2026-06-08 02:22:52

ಸಿಬಿಟಿ ಮಾದರಿಯಲ್ಲಿ ನೀಟ್ ಮರುಪರೀಕ್ಷೆ: ಸುಪ್ರೀಂ ಕೋರ್ಟ್ ನಕಾರ|Speed News Kannada

ಸಿಬಿಟಿ ಮಾದರಿಯಲ್ಲಿ ನೀಟ್ ಮರುಪರೀಕ್ಷೆ: ಸುಪ್ರೀಂ ಕೋರ್ಟ್ ನಕಾರ|Speed News Kannada

ನವದೆಹಲಿ: ಜೂನ್ 21ರಂದು ನಡೆಯಲಿರುವ ‘ನೀಟ್-ಯುಜಿ’ 2026ರ ಮರುಪರೀಕ್ಷೆಯನ್ನು ಕಂಪ್ಯೂಟರ್‌ ಮೂಲಕ (ಕಂಪ್ಯೂಟರ್‌ ಬೇಸ್ಡ್‌ ಟೆಸ್ಟ್‌– ಸಿಬಿಟಿ) ನಡೆಸಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ತಕ್ಷಣದಲ್ಲಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹ ಮತ್ತು ಅರವಿಂದ ಕುಮಾರ್ ಅವರ ಪೀಠವು, ಈ ವಿಷಯದ ತ್ವರಿತ ವಿಚಾರಣೆಗೆ ಆಸಕ್ತಿ  ತೋರುವುದಿಲ್ಲ ಎಂದು ತಿಳಿಸಿತು. ಅರ್ಜಿದಾರರ ಪರ ವಕೀಲ ವಕೀಲ ಸತ್ಯಂ ಸಿಂಗ್ ಅವರು ಪರೀಕ್ಷೆಯನ್ನು ಸಿಬಿಟಿ ಮಾದರಿಯಲ್ಲಿ ನಡೆಸಬೇಕು ಎಂದು ಪೀಠಕ್ಕೆ ಮನವಿ ಮಾಡಿಕೊಂಡರು.

ಈಗಾಗಲೇ ಇದೇ ರೀತಿಯ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದ ನ್ಯಾಯಮೂರ್ತಿ ನರಸಿಂಹ ಅವರು, ‘ನೀಟ್‌–ಯುಜಿ’ ಮರುಪರೀಕ್ಷೆ ನಡೆಸಲು ಇರುವ ಸವಾಲುಗಳನ್ನು ಒಂದೊಂದಾಗಿ ಎತ್ತಿ ತೋರಿಸಿದರು.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಲ್ಲಿನ (ಎನ್‌ಟಿಎ) ಸುಧಾರಣೆಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳೊಂದಿಗೆ ಈ ಅರ್ಜಿಯನ್ನು ಜುಲೈನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದೂ ಪೀಠ ತಿಳಿಸಿತು.

ಮುಂದಿನ ವರ್ಷದಿಂದ (2027) ‘ನೀಟ್‌–ಯುಜಿ’ಗೆ ಕಂಪ್ಯೂಟರ್‌ ಮೂಲಕ ಪರೀಕ್ಷೆ ನಡೆಸಲು ಸಿದ್ಧವಾಗಿರುವುದಾಗಿ ಎನ್‌ಟಿಎ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.