2026-06-08 01:26:46

Struggle over release of Kai candidate list for Tamil Nadu by elections|ತಮಿಳುನಾಡು ಉಪಚುನಾವಣೆʼಕೈ ಅಭ್ಯರ್ಥಿ ಪಟ್ಟಿ ಬಿಡುಗಡೆಗೆ ಹೆಣಗಾಟ|Speed News Kannada

Struggle over release of Kai candidate list for Tamil Nadu by elections|ತಮಿಳುನಾಡು ಉಪಚುನಾವಣೆʼಕೈ ಅಭ್ಯರ್ಥಿ ಪಟ್ಟಿ ಬಿಡುಗಡೆಗೆ ಹೆಣಗಾಟ|Speed News Kannada

ತಮಿಳುನಾಡು ವಿಧಾನಸಭಾ ಚುನಾವಣಾ ಕಣ ಈಗ ರಂಗೇರಿದೆ. ಆದರೆ ಡಿಎಂಕೆ ನೇತೃತ್ವದ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಕಾಂಗ್ರೆಸ್‌ನಲ್ಲಿ ಮಾತ್ರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಹಳಿ ಹತ್ತಿದಂತೆ ಕಾಣುತ್ತಿಲ್ಲ. ನಾಮಪತ್ರ ಸಲ್ಲಿಕೆ ಆರಂಭವಾದರೂ ಹಸ್ತ ಪಡೆ ತನ್ನ ಪಟ್ಟಿಯನ್ನು ಪ್ರಕಟಿಸಲು ಪರದಾಡುತ್ತಿದೆ. ಡಿಎಂಕೆ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ಗೆ 28 ಸ್ಥಾನಗಳನ್ನು ನೀಡಲಾಗಿದೆ. ಆದರೆ ಈ ಪೈಕಿ ಐದು ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸುವುದು ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಊಟಿ, ಮೈಲಾಡುತುರೈ, ಅತ್ತೂರು, ಶಂಕರನ್ಕೋವಿಲ್ ಮತ್ತು ಅಂಬಸಮುದ್ರಂ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಸಿಗದೆ ಸ್ಕ್ರೀನಿಂಗ್ ಕಮಿಟಿ ಹೆಣಗಾಡುತ್ತಿದೆ.

ಪಕ್ಷದ ಮೂಲಗಳ ಪ್ರಕಾರ, ಕಾಂಗ್ರೆಸ್ ಒಟ್ಟು 45 ಸ್ಥಾನಗಳ ನಿರೀಕ್ಷೆಯಲ್ಲಿದ್ದು 80 ಕ್ಷೇತ್ರಗಳಲ್ಲಿ ಸಿದ್ಧತೆ ನಡೆಸಿತ್ತು. ಆದರೆ ಡಿಎಂಕೆ ನೀಡಿರುವ 28 ಕ್ಷೇತ್ರಗಳಲ್ಲಿ 14 ಕ್ಷೇತ್ರಗಳು ಕಾಂಗ್ರೆಸ್‌ನ ಮೂಲ ಪಟ್ಟಿಯಲ್ಲೇ ಇರಲಿಲ್ಲ. ಹೀಗಾಗಿ ಹೊಸ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. ಇನ್ನು ಎರಡು ಖಾಸಗಿ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲೂ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಪರಿಸ್ಥಿತಿ ಪೂರಕವಾಗಿಲ್ಲ ಎಂಬ ವರದಿ ಬಂದಿರುವುದು ಹೈಕಮಾಂಡ್ ನಿದ್ದೆ ಕೆಡಿಸಿದೆ.

ದೆಹಲಿಯಲ್ಲಿ ನಡೆದ ಸುದೀರ್ಘ ಸಭೆಯ ಬಳಿಕ ಮಾತನಾಡಿದ ಟಿಎನ್‌ಸಿಸಿ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ, "ಶೇ. 85 ರಷ್ಟು ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ" ಎಂದು ತಿಳಿಸಿದ್ದಾರೆ. ಸಮೀಕ್ಷೆಯ ನೆಗೆಟಿವ್ ರಿಪೋರ್ಟ್ ಬೆನ್ನಲ್ಲೇ ಅಭ್ಯರ್ಥಿಗಳ ಬದಲಾವಣೆಗಾಗಿ ಮರು ಸಮೀಕ್ಷೆಗೆ ಪಕ್ಷ ಮನವಿ ಮಾಡಿದೆ ಎನ್ನಲಾಗಿದೆ.ಒಟ್ಟಿನಲ್ಲಿ ಮಿತ್ರಪಕ್ಷ ನೀಡಿದ ಕ್ಷೇತ್ರಗಳಲ್ಲಿ ಕಮಾಲ್ ಮಾಡಲು ಹೊರಟಿರುವ ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಕೊರತೆ ಎದುರಾಗಿದೆಯೇ ಅಥವಾ ಕಾರ್ಯತಂತ್ರದ ಭಾಗವಾಗಿ ವಿಳಂಬ ಮಾಡಲಾಗುತ್ತಿದೆಯೇ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.