ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆ, ಇರಾನ್ ಮಹತ್ವದ ಘೋಷಣೆ ಮಾಡಿದೆ. ಹೊರ್ಮುಜ್ ಜಲಸಂಧಿಯ ಬಗ್ಗೆ ಹೊಸ ನೀತಿಯನ್ನು ಪ್ರಕಟಿಸಿರುವುದು ಜಾಗತಿಕ ಗಮನ ಸೆಳೆದಿದೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಸಂಘರ್ಷದ ನಡುವೆಯೇ, ಇರಾನ್ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಶತ್ರು ರಾಷ್ಟ್ರಗಳಿಗೆ ಮಾತ್ರ ನಿರ್ಬಂಧ ವಿಧಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ವಕ್ತಾರ ಇಬ್ರಾಹಿಂ ಝೋಲ್ಫಾಘರಿ, ಇರಾಕ್ ಜನತೆಗೆ ನೀಡಿದ ಹೇಳಿಕೆಯಲ್ಲಿ, ಹೊರ್ಮುಜ್ ಮೇಲಿನ ಬಿಕ್ಕಟ್ಟು ಸ್ವಲ್ಪ ಮಟ್ಟಿಗೆ ಇಳಿಯುವ ಸೂಚನೆ ನೀಡಿದ್ದಾರೆ. ಇರಾಕ್ ನಿರಂತರ ಬೆಂಬಲ ನೀಡಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ.ಇರಾನ್ ಸ್ಪಷ್ಟಪಡಿಸಿರುವಂತೆ, ಶತ್ರು ದೇಶಗಳ ಹಡಗುಗಳಿಗೆ ಮಾತ್ರ ಹೊರ್ಮುಜ್ ಮಾರ್ಗವನ್ನು ಮುಚ್ಚಲಾಗುತ್ತದೆ.
ಆದರೆ ಸ್ನೇಹಪರ ದೇಶಗಳಿಗೆ, ಪೂರ್ವಾನುಮತಿಯೊಂದಿಗೆ ಸಾಗುವ ಅವಕಾಶ ಇರುತ್ತದೆ.ಈ ನಿರ್ಬಂಧಗಳು ಇರಾಕ್‌ಗೆ ಅನ್ವಯಿಸುವುದಿಲ್ಲ ಎಂದು ಇರಾನ್ ಹೇಳಿದೆ. ಇರಾಕ್‌ನ ಸಾರ್ವಭೌಮತ್ವವನ್ನು ಗೌರವಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಒಟ್ಟಿನಲ್ಲಿ, ಯುದ್ಧದ ನಡುವೆಯೂ ಸ್ನೇಹಪರ ರಾಷ್ಟ್ರಗಳಿಗೆ ಅನುಕೂಲ ಮಾಡಿಕೊಡುವ ಮೂಲಕ, ಇರಾನ್ ಸಮತೋಲನದ ನೀತಿಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ.