ಬೆಂಗಳೂರು: ಕಲಬುರಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಪವಿತ್ರ ರಾಘವ ಚೈತನ್ಯ ಶಿವಲಿಂಗದ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಿಸಲಾಗಿದ್ದ ಕೋಮು ಗಲಭೆಯ 13 ಪ್ರಕರಣಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿರುವುದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಖಂಡಿಸಿದ್ದಾರೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಶಾಕ್ ದರ್ಗಾದಲ್ಲಿ ನಡೆದ ಕೋಮು ಗಲಭೆಯ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು. ಈ ನಿರ್ಧಾರ ಖಂಡಿಸಿ ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಚಿಕೆಗೆಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕ್ ಓಲೈಕೆಯ ಕೀಳು ರಾಜಕೀಯ ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣದ ಪರಮಾವಧಿಯ ನಿರ್ಲಜ್ಜ ಪ್ರದರ್ಶನಕ್ಕೆ ರಾಜ್ಯ ಈಗ ಸಾಕ್ಷಿಯಾಗಿದೆ. ಕನಿಷ್ಠ ಜವಾಬ್ದಾರಿಯೂ ಇಲ್ಲದೆ, ನೈತಿಕತೆ, ಗೌರವಗಳೆಲ್ಲವನ್ನೂ ಗಾಳಿಗೆ ತೂರಿ, ಸಭ್ಯತೆಯ ಎಲ್ಲಾ ಮಿತಿಗಳನ್ನೂ ಈ ತುಘಲಕ್ ಕಾಂಗ್ರೆಸ್ ಸರ್ಕಾರ ದಾಟಿದೆ.
ಕಲಬುರಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಪವಿತ್ರ ರಾಘವ ಚೈತನ್ಯ ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ, ದಾರ್ಷ್ಟ್ಯ ಮೆರೆದಿದ್ದಲ್ಲದೆ, ಆ ಸಮಯದಲ್ಲಿ ಅಂದಿನ ಕೇಂದ್ರ ಸಚಿವರು, ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರ ವಾಹನಗಳ ಮೇಲೆ ಮಾರಕಾಸ್ತ್ರಗಳಿಂದ ಕಲ್ಲು ತೂರಾಟ ನಡೆಸಿದ್ದ ಘೋರ ಅಪರಾಧ ಮತ್ತು ಹೀನಾಯ ಕೋಮು ಗಲಭೆಯ 13 ಪ್ರಕರಣಗಳನ್ನು ಈ ತುಘಲಕ್ ಸರ್ಕಾರ ವಾಪಸ್ ಪಡೆದಿರುವುದನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ. ಸಮಾಜದ ಶಾಂತಿ ಕದಡಿದ ಇಂತಹ ಗಂಭೀರ ಅಪರಾಧದ ಸಮಾಜವಿರೋಧಿ ಕಿಡಿಗೇಡಿಗಳನ್ನು ರಾಜಾರೋಷವಾಗಿ ಮುಕ್ತಗೊಳಿಸುವ ಮೂಲಕ ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೀರಿ ಮುಖ್ಯಮಂತ್ರಿಗಳೇ? ಈ ಕಾಂಗ್ರೆಸ್ ಸರ್ಕಾರಕ್ಕೆ, ಹಿಂದೂ ಧರ್ಮದ ಬಗ್ಗೆ ಕನಿಷ್ಟ ಗೌರವ, ಹಿಂದೂಗಳ ಮನಸ್ಸಿಗೆ ಆಗಿರುವ ನೋವು, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕನಿಷ್ಠ ಸಂವೇದನೆ, ಗೌರವವಾದರೂ ಉಳಿದಿದೆಯೇ?
ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾದ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಅವರೇ ಸ್ವತಃ ಈ ದುರುಳ ದಗಾಕೋರರ ಪ್ರಕರಣಗಳನ್ನು ಹಿಂಪಡೆಯಲು ಶಿಫಾರಸು ಮಾಡಿರುವ ವರದಿ ಮತ್ತಷ್ಟು ಖೇದನೀಯ ಮಾತ್ರವಲ್ಲ ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ! ಇದು ನಿಜಕ್ಕೂ ಅತ್ಯಂತ ದುರ್ದೈವದ ಸಂಗತಿ.
ಕೇವಲ ನಿಮ್ಮ ಕೊಳಕು ಓಲೈಕೆಗಾಗಿ, ಸಮಾಜಘಾತುಕ ಶಕ್ತಿಗಳಿಗೆ, ಅಪರಾಧಿಗಳಿಗೆ ಕ್ಲೀನ್ ಚೀಟ್ ನೀಡುತ್ತಿರುವ ಮುಖ್ಯಮಂತ್ರಿ @siddaramaiah ಅವರೇ, ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಹಾಗೂ ನಾಡಿನ ಸುರಕ್ಷತೆಯನ್ನು ಮುಸ್ಲಿಂ ವೋಟ್ ಬ್ಯಾಂಕಿಗೆ ಅಡವಿಟ್ಟಿರುವ ನಿಮ್ಮ ಈ ಜನವಿರೋಧಿ ಧೋರಣೆಯನ್ನು ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.