ಟಿ20 ಕ್ರಿಕೆಟ್ನಲ್ಲಿ ಅಭಿಷೇಕ್ ಶರ್ಮಾ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ. ಈ ಶತಕದೊಂದಿಗೆ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯೊಂದನ್ನು ಅಭಿಷೇಕ್ ಶರ್ಮಾ ಅಳಿಸಿ ಹಾಕಿದ್ದಾರೆ. ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ 68 ಎಸೆತಗಳಲ್ಲಿ 10 ಫೋರ್ ಹಾಗೂ 10 ಸಿಕ್ಸರ್ಗಳೊಂದಿಗೆ ಅಜೇಯ 135 ರನ್ ಬಾರಿಸಿದರು. 135 ರನ್ಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ 130+ ಸ್ಕೋರ್ ಗಳಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಂದರೆ ಐಪಿಎಲ್ನಲ್ಲಿ ಯಾವುದೇ ಬ್ಯಾಟರ್ 2 ಬಾರಿ 130+ ರನ್ಗಳ ವೈಯುಕ್ತಿಕ ಇನಿಂಗ್ಸ್ ಆಡಿಲ್ಲ. ಇದೀಗ ಅಭಿಷೇಕ್ ಶರ್ಮಾ 2 ಶತಕಗಳೊಂದಿಗೆ ಈ ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು 130+ ಸ್ಕೋರ್ ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಸಹ ಅಭಿಷೇಕ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ. ಅಭಿಷೇಕ್ ಈವರೆಗೆ ಟಿ20 ಕ್ರಿಕೆಟ್ನಲ್ಲಿ 4 ಬಾರಿ 130+ ಸ್ಕೋರ್ಗಳಿಸಿದ್ದಾರೆ. ಈ ಮೂಲಕ ಕ್ರಿಸ್ ಗೇಲ್ (3 ಬಾರಿ) ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.