2026-06-25 02:04:55

Son loses case against mother | ಒಬ್ಬ ಮಗನನ್ನು ಬಿಟ್ಟು ಉಳಿದ ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡಿ ವಿಲ್ ಬರೆದ ತಾಯಿ ಕೇಸ್ ಹಾಕಿದ ಮಗನಿಗೆ ಸೋಲು | Speed News Kannada

Son loses case against mother | ಒಬ್ಬ ಮಗನನ್ನು ಬಿಟ್ಟು ಉಳಿದ ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡಿ ವಿಲ್ ಬರೆದ ತಾಯಿ ಕೇಸ್ ಹಾಕಿದ ಮಗನಿಗೆ ಸೋಲು | Speed News Kannada

ತಿರುವನಂತಪುರಂ, ಮಾರ್ಚ್ 4: ಗಂಡನಿಂದ ದಾನವಾಗಿ ಬಂದ ಭೂಮಿಯನ್ನು ಮಹಿಳೆಯೊಬ್ಬರು ತನ್ನ ಆರು ಮಕ್ಕಳಲ್ಲಿ ಐವರಿಗೆ ಮಾತ್ರವೇ ಹಂಚಿಕೆ ಮಾಡಿ ವಿಲ್ ಬರೆದಿದ್ದರು. ಈಗ ಆಸ್ತಿ ಸಿಗದ ಆ ಒಬ್ಬ ಮಗ ಕೋರ್ಟ್ ಮೆಟ್ಟಿಲೇರಿದರು. ಆದರೆ, ನ್ಯಾಯಾಲಯದಲ್ಲಿ ತಾಯಿಯ ಪರವಾಗಿ ತೀರ್ಪು ಬಂದಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ತನಗೆ ಹಕ್ಕಿದೆ ಎನ್ನುವ ಮಗನ ವಾದವನ್ನು ಕೋರ್ಟ್ ಒಪ್ಪಿಲ್ಲ.

ಏನಿದು ಪ್ರಕರಣ?
ವೆಂಕಿಟನ್ ಎಂಬ್ರಾಂದಿರಿ ಎಂಬುವವರು 1925ರಲ್ಲಿ ಒಂದು ಎಕರೆ 26 ಸೆಂಟ್ ಜಮೀನನ್ನು ಖರೀದಿ ಮಾಡುತ್ತಾರೆ. ಅವರಿಗೆ ಇಬ್ಬರು ಹೆಣ್ಮಕ್ಕಳು ಸೇರಿ ಆರು ಮಕ್ಕಳಿದ್ದರು. ಅವರಲ್ಲಿ ಟಿ.ವಿ. ರಾಮಚಂದ್ರ ರಾವ್‌ ಒಬ್ಬರು. ವೆಂಕಿಟನ್ ಮೃತಪಟ್ಟಾಗ ಮಕ್ಕಳೆಲ್ಲರೂ 1967ರಲ್ಲಿ ಪಾರ್ಟಿಶನ್ ಡೀಡ್ ಮಾಡಿದರು. ಆಗ ರಾಮಚಂದ್ರ ರಾವ್ ಅವರಿಗೆ 37 ಸೆಂಟ್ ಆಸ್ತಿ ಸಿಕ್ಕಿತು. ರಾಧಮ್ಮ ಎನ್ನುವ ಸಹೋದರಿಯೊಬ್ಬರು ತನ್ನ ಪಾಲಿನ 9 ಸೆಂಟ್ ಜಾಗವನ್ನು ಬಿಟ್ಟುಕೊಡುತ್ತಾರೆ. ಟಿ.ವಿ. ರಾಮಚಂದ್ರರಾವ್ ಅವರಿಗೆ ಸಿಕ್ಕ ಜಾಗ 46 ಸೆಂಟ್‌ಗೆ ಏರುತ್ತದೆ. 1978ರಲ್ಲಿ ರಾಮಚಂದ್ರರಾವ್ ಈ 46 ಸೆಂಟ್ ಜಾಗವನ್ನು ತಮ್ಮ ಧರ್ಮಪತ್ನಿಗೆ ದಾನವಾಗಿ ನೀಡುತ್ತಾರೆ. 1986ರಲ್ಲಿ ರಾವ್ ಮೃತರಾಗುತ್ತಾರೆ. ಇವರಿಗೆ ಆರು ಮಕ್ಕಳಿದ್ದಾರೆ. ರಾಮಚಂದ್ರರಾವ್ ನಿಧನರಾಗಿ ಕೆಲ ವರ್ಷಗಳ ಬಳಿಕ ಅವರ ಪತ್ನಿ ವಿಲ್ ಬರೆಯುತ್ತಾರೆ. ಒಬ್ಬ ಮಗನನ್ನು ಬಿಟ್ಟು ಉಳಿದ ಐವರಿಗೆ ಆಸ್ತಿ ಹಂಚಿಕೆ ಮಾಡಿ ವಿಲ್ ಬರೆಯುತ್ತಾರೆ.
ಇದನ್ನು ಆಕ್ಷೇಪಿಸಿ ಮಗ ಕೋರ್ಟ್ ಮೆಟ್ಟಿಲೇರುತ್ತಾನೆ. ಇದು ಪಿತ್ರಾರ್ಜಿತ ಆಸ್ತಿಯಾಗಿದ್ದು ತನಗೆ ಹಕ್ಕು ಇದೆ ಎಂದು ವಾದಿಸುತ್ತಾನೆ. ಆದರೆ, ರಾಮಚಂದ್ರ ರಾವ್ ಅವರ ಕಾಪರ್ಸನರಿ ಪ್ರಾಪರ್ಟಿಯಲ್ಲವಾದ್ದರಿಂದ ಅವರ ಮಗನಿಗೆ ಆಸ್ತಿ ಹಕ್ಕು ಇಲ್ಲ. ಇದರ ಪೂರ್ಣ ಹಕ್ಕು ತನಗೇ ಸೇರಿದ್ದು ಎಂದು ಆತನ ತಾಯಿ ವಾದ ಮಾಡುತ್ತಾರೆ. ಕೋರ್ಟ್ ಕೂಡ ಈ ವಾದವನ್ನು ಪುರಸ್ಕರಿಸಿ, ತಾಯಿ ಪರವಾಗಿ ತೀರ್ಪು ಕೊಡುತ್ತದೆ. 

ಪಿತ್ರಾರ್ಜಿತ ಆಸ್ತಿ ಎನಿಸುವುದು ಹೇಗೆ?
ನಾಲ್ಕು ತಲೆಮಾರುಗಳಿಂದ ಯಾವುದೇ ಪಾರ್ಟಿಶನ್ ಇಲ್ಲದೇ ಆಸ್ತಿಯು ಬಳುವಳಿಯಾಗಿ ಬಂದಿರಬೇಕು. ಪಾರ್ಟಿಶನ್ ಆದಾಗ ಅದು ಸ್ವಂತ ಸಂಪಾದನೆ ಎಂದು ಪರಿಗಣಿತವಾಗುತ್ತದೆ. ರಾಮಚಂದ್ರರಾವ್ ಅವರು ತಮ್ಮ ತಂದೆಯಿಂದ ಆಸ್ತಿಯನ್ನು ಪಾರ್ಟಿಶನ್ ಡೀಡ್ ಮೂಲಕ ಪಡೆದಿದ್ದರು. ಹೀಗಾಗಿ, ಅದು ಅವರ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಗೆ ಹಕ್ಕುದಾರರನ್ನಾಗಿ ಮಾಡಿರಲಿಲ್ಲ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.