ನವದೆಹಲಿ: ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೇ 30ರಿಂದ 3ನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ನಡೆಯಲಿದೆ. ಕರ್ನಾಟಕ, ತೆಲಂಗಾಣ, ಪಂಜಾಬ್, ಮೇಘಾಲಯ, ಮಹಾರಾಷ್ಟ್ರ ದೆಹಲಿ, ಒಡಿಶಾ, ಮಿಜೋರಾಂ, ಸಿಕ್ಕಿಂ, ಮಣಿಪುರ, ಉತ್ತರಾಖಂಡ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಹರಿಯಾಣ, ಚಂಡೀಗಢ, ಜಾರ್ಖಂಡ್, ನಾಗಾಲ್ಯಾಂಡ್, ತ್ರಿಪುರ, ದಾದರ್ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯುಗಳಲ್ಲಿ ಮೂರನೇ ಹಂತದಲ್ಲಿ ಎಸ್‌ಐಆರ್ ನಡೆಯಲಿದೆ.
3ನೇ ಹಂತದ ಎಸ್‌ಐಆರ್‌ನಲ್ಲಿ 3.94 ಲಕ್ಷಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು 36.73 ಕೋಟಿ ಮತದಾರರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.
ಸುಮಾರು 99 ಕೋಟಿ ಮತದಾರರಲ್ಲಿ 60 ಕೋಟಿ ಜನರು ಈ ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಉಳಿದ ಸುಮಾರು 40 ಕೋಟಿ ಮತದಾರರು 17 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತಾವಿತ ಎಸ್‌ಐಆರ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದುವರೆಗೆ 10 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ನಡೆದಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕೇರಳಂ, ಪುದುಚೆರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಗುಜರಾತ್, ಮಧ್ಯಪ್ರದೇಶ, ಗೋವಾ ಮತ್ತು ಬಿಹಾರ, ತಮಿಳುನಾಡು, ರಾಜಸ್ಥಾನ, ಛತ್ತೀಸಗಢದಲ್ಲಿ ಎಸ್‌ಐಆರ್ ಪೂರ್ಣಗೊಂಡಿದೆ.