ಬ್ಯಾಂಕಾಕ್ (ಪಿಟಐ): ಅನುಭವಿ ಷಟ್ಲರ್‌ಗಳಾದ ಪಿ.ವಿ.ಸಿಂಧು, ಲಕ್ಷ್ಯ ಸೇನ್ ಮತ್ತು ಕಿದಂಬಿ ಶ್ರೀಕಾಂತ್ ಅವರು ತಮ್ಮ ಎದುರಾಳಿಗಳನ್ನು ನೇರ ಸೆಟ್ ಗಳಿಂದ ಸೋಲಿಸಿ ಥಾಯ್ಲೆಂಡ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ನಲ್ಲಿ ಎರಡನೇ ಸುತ್ತನ್ನು ತಲುಪಿದ್ದಾರೆ. ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ ಶ್ರೀಕಾಂತ್ 21-14, 21-15 ರಿಂದ ವಿಶ್ವದ ಎಂಟನೇ ಕ್ರಮಾಂಕದ ಲೊಹ್ ಕೀನ್ ಯೆ (ಸಿಂಗಪುರ) ಅವರನ್ನು 21-14, 21-15 ರಿಂದ ಸೋಲಿಸಿದ್ದು ಗಮನಸೆಳೆಯಿತು. 30 ನಿಮಿಷಗಳಲ್ಲಿ ಗೆದ್ದ ಶ್ರೀಕಾಂತ್ ಅವರು 16ರ ಸುತ್ತಿನಲ್ಲಿ ಚೀನಾ ತೈಪೆಯ ಸು ಲಿ ಯಾಂಗ್ ಎದುರು ಆಡಲಿದ್ದಾರೆ.
ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ರನ್ನರ್ ಅಪ್, ಏಳನೇ ಶ್ರೇಯಾಂಕದ ಲಕ್ಷ ಸೇನ್ 21-16, 21-17 ರಿಂದ ಸಿಂಗಪುರದ ಜಿಯಾ ಹೆಂಗ್ ಜೇಸನ್ ಟೇ ಅವರನ್ನು ಸೋಲಿಸಿದರು. ಸಿಂಧು ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ 21-12, 21-9 ರಿಂದ ಚೀನಾ ತೈಪೆಯ ಟುಂಗ್ ಸಿಯಾವು-ಟೊಂಗ್ ಅವರನ್ನು ಹಿಮ್ಮೆಟ್ಟಿಸಿದರು. ಸಿಂಧು ಪ್ರಿಕ್ವಾರ್ಟ‌್ರಫೈನಲ್‌ನಲ್ಲಿ ಡೆನ್ಮಾರ್ಕ್ ಅಮೇಲಿ ಶುಲ್ಫ್ ಅವರನ್ನು ಎದುರಿಸಲಿದ್ದಾರೆ.
ಉದಯೋನ್ಮುಖ ಆಟಗಾರ್ತಿ ದೇವಿಕಾ ಸಿಹಾಗ್ ಕೂಡ ಉತ್ತಮ ಪ್ರದರ್ಶನ ನೀಡಿ, ವಿಶ್ವ ಕ್ರಮಾಂಕದಲ್ಲಿ 26ನೇ ಸ್ಥಾನದಲ್ಲಿರುವ ನಟ್ಟುಕಿ ನಿದೈರಾ (ಜಪಾನ್) ಅವರನ್ನು 21-19, 13-21, 21-15 ರಿಂದ ಸೋಲಿಸಿದರು. ಈ ಪಂದ್ಯ 71 ನಿಮಿಷಗಳವರೆಗೆ ನಡೆಯಿತು. ಯುವ ಆಟಗಾರ್ತಿ ಮಾಳವಿಕಾ ಬನ್ನೊಡ್ 13-21, 26-24, 21-13 ರಿಂದ ಚೀನಾದ ವೆನ್ ಯು ಝಾಂಗ್ ವಿರುದ್ಧ ಜಯಗಳಿಸಿದರು. ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು.