ಬೆಂಗಳೂರು: ಅಧಿಕಾರ ಹಸ್ತಾಂತರದ ಗೊಂದಲಕ್ಕೆ ಈ ವಾರದಲ್ಲಿ ತೆರೆ ಬೀಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಈ ಸುದ್ದಿಗೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ದೆಹಲಿಗೆ ವಿಮಾನ ಹತ್ತಲು ಸಿದ್ದರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಸಂಜೆಯೆ ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ. ಇವರ ಜತೆ ಕೆಲವು ಆಪ್ತ ಸಚಿವರೂ ತೆರಳುತ್ತಿರುವುದು ಕುತೂಹಲ ಮೂಡಿಸಿದೆ. ಸಚಿವರಾದ ಡಾ.ಜಿ. ಪರಮೇಶ್ವರ್, ಎಂ.ಬಿ.ಪಾಟೀಲ್ ಮೊದಲಾದವರು ಸಿಎಂಗೆ ಸಾಥ್ ನೀಡುತ್ತಿದ್ದಾರೆ.
ನಾಳೆ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಸಂಭವವಿದೆ. ರಾಜಕೀಯ ವಿದ್ಯಾಮಾನಗಳು, ರಾಜ್ಯಸಭೆ ಚುನಾವಣೆ, ಸಂಪುಟ ವಿಸ್ತರಣೆ, ಎಸ್ ಐಆರ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಹೋರಾಟ ಕುರಿತು ಮಾತುಕತೆ ನಡೆಯಲಿದೆ.
ಅಧಿಕಾರ ಹಸ್ತಾಂತರ ಕುರಿತು ಹೈಕಮಾಂಡ್ ಯಾವ ಸೂಚನೆ ನೀಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಡಿಕೆ ಬ್ರದರ್ಸ್ ಚರ್ಚೆ:
ಸಿಎಂಗೆ ಆಹ್ವಾನ ನೀಡಲಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ ಡಿಕೆ ಶಿವಕುಮಾರ್ ತಮ್ಮ ಸಹೋದರ ಡಿಕೆ ಸುರೇಶ್ ಜತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಇಬ್ಬರೂ ಸಹೋದರರು ನಿನ್ನೆ ತಡರಾತ್ರಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಈ ವಾರದಲ್ಲಿ ಅಧಿಕಾರ ಹಸ್ತಾಂತರದ ಗೊಂದಲಗಳಿಗೆ ಹೈಕಮಾಂಡ್ ಬ್ರೇಕ್ ಹಾಕಲಿದೆ. ಮುಂಗಾರು ಅಧಿವೇಶನಕ್ಕೂ ಮುನ್ನ ಮಹತ್ವದ ಬದಲಾವಣೆ ಆಗಲಿದೆ ಎಂದು ತಿಳಿದು ಬಂದಿದೆ. ಆದರೆ ಹಸ್ತಾಂರವೋ ಸಚಿವ ಸಂಪುಟ ವಿಸ್ತರಣೆಯೋ ಎನ್ನುವುದು ಮಾತ್ರ ಗುಪ್ತವಾಗಿದೆ.
ಸಿದ್ದರಾಮಯ್ಯ ರಾಜ್ಯಸಭೆಗೆ?
ಸಿಎಂ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣ ಪ್ರವೇಶಿಸುವಂತೆ ಹೈಕಮಾಂಡ್ ಕೇಳಲಿದೆ ಎಂದೂ ಹೇಳಲಾಗುತ್ತಿದೆ. ಆದರೆ ಹಿಂದಿ ಬಾರದ ಅವರು ದೆಹಲಿ ರಾಜಕಾರಣವನ್ನು ಒಪ್ಪಲಾರರು. ಸಿದ್ದರಾಮಯ್ಯ ಒಪ್ಪದೇ ಹೋದರೆ ಸಚಿವ ಸಂಪುಟ ವಿಸ್ತರಣೆಗೆ ರಾಹುಲ್ ಗಾಂಧಿ ಅಸ್ತು ಎನ್ನಬಹುದು.