2026-06-08 02:21:53

ದೆಹಲಿಯತ್ತ ಸಿದ್ದರಾಮಯ್ಯ; ದಿನಾಂಕ ನಿಗದಿಗೆ ಅಜ್ಜಯ್ಯನ ಮಠಕ್ಕೆ ಶಿವಕುಮಾರ್|Speed News Kannada

ದೆಹಲಿಯತ್ತ ಸಿದ್ದರಾಮಯ್ಯ; ದಿನಾಂಕ ನಿಗದಿಗೆ ಅಜ್ಜಯ್ಯನ ಮಠಕ್ಕೆ ಶಿವಕುಮಾರ್|Speed News Kannada

ಬೆಂಗಳೂರು: ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಇಂದು ಬೆಳಗ್ಗೆ ಹಮ್ಮಿಕೊಂಡಿದ್ದ ಉಪಾಹಾರ ಸಭೆಯಲ್ಲಿ, ಮುಖ್ಯಮಂತ್ರಿ ಸ್ಥಾನ ತ್ಯಜಿಸುವುದಾಗಿ ಸಿದ್ದರಾಮಯ್ಯ ಅಧಿಕೃತವಾಗಿ ಪ್ರಕಟಿಸಿದ್ದಾರೆ.  

 

ತಮ್ಮ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಉಪಹಾರ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತಮ್ಮ ನೇತೃತ್ವದ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ನೆನಪು ಮಾಡಿಕೊಂಡ ಅವರು, ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ವಿವರಿಸಿದ್ದಾರೆ. ಸಿದ್ದರಾಮಯ್ಯ ಅವರ ಭಾಷಣ ಆಲಿಸುತ್ತಿದ್ದ ಬಹುತೇಕ ಸಚಿವರು ಭಾವುಕರಾದರು ಎಂದು ತಿಳಿದು ಬಂದಿದೆ.

ಉಪಹಾರ ಸಭೆಗೆ ಆಗಮಿಸಿದ ಎಲ್ಲ ಸಚಿವರನ್ನು ಸಿದ್ದರಾಮಯ್ಯ ನಗು ನಗುತ್ತಲೇ ಆಹ್ವಾನಸಿದರು. ಉಪಾಹಾರಕ್ಕೆ ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿಬಾತ್, ದೋಸೆ, ಪೊಂಗಲ್, ಪೂರಿ ನೀಡಲಾಗಿತ್ತು. ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಇಬ್ಬರೂ ಅಕ್ಕಪಕ್ಕ ಕುಳಿತು ಉಪಹಾರ ಸೇವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನಕ್ಕೆ ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಯಾವುದೇ ನೋವಿಲ್ಲ. ಹೈಕಮಾಂಡ್ ಹೇಳುವುವುದನ್ನು ಪಾಲನೆ ಮಾಡುವುದು ನನ್ನ ಕರ್ತವ್ಯ ಎಂದು ಸಭೆಗೆ ತಿಳಿಸಿದ್ದಾರೆ.

ಉಪಾಹಾರ ಸಭೆಯ ಬಳಿಕ ಲೋಕಭವನಕ್ಕೆ ತೆರಳಿ ತಮ್ಮ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ. ನಂತರ  ಮತ್ತೆ ದೆಹಲಿಗೆ ತೆರಳಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಕಣ್ಣಿಟ್ಟಿರುವ ಸುರ್ಜೇವಾಲಾ: ಬ್ರೇಕ್‌ ಫಾಸ್ಟ್‌ ಮೀಟಿಂಗ್ ಮೇಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹದ್ದಿನ ಕಣ್ಣಿಟ್ಟಿದ್ದಾರೆ. ಸಚಿವರು, ಶಾಸಕರ ಮೇಲೆ ಗಮನವಿಡಲು ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ಇಂದು ಯಾವುದೇ ಅಧಿಕೃತ ಕಾರ್ಯಕ್ರಮಗಳಿಲ್ಲದಿದ್ದರೂ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಎಚ್ಚರದಿಂದ ಗಮನಿಸುತ್ತಿದ್ದಾರೆ.

ಉಪಹಾರ ಸಭೆ ಮುಗಿಯುತ್ತಿದ್ದಂತೆ ಡಿಕೆ ಶಿವಕುಮಾರ್‌ ಅವರು ತುಮಕೂರು ಜಿಲ್ಲೆ ತಿಪಟೂರಿನ ಅಜ್ಜಯ್ಯನ ಮಠಕ್ಕೆ ತೆರಳಲಿದ್ದಾರೆ. ಪ್ರಮಾಣವಚನದ ಸಮಯವನ್ನು ನಿಗದಿಮಾಡಿಕೊಂಡು ಬರಲಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.