2026-06-08 01:33:38

shringeri, postal ballot papers tampered; rajegowda demand enquiry| ಶೃಂಗೇರಿ: ಮತಪತ್ರ ತಿದ್ದಲಾಗಿದೆ, ಸೂಕ್ತ ತನಿಖೆ ನಡೆಸಿ: ಮಾಜಿ ಶಾಸಕ ರಾಜೇಗೌಡ ಒತ್ತಾಯ| Speed News Kannada

shringeri, postal ballot papers tampered; rajegowda demand enquiry| ಶೃಂಗೇರಿ: ಮತಪತ್ರ ತಿದ್ದಲಾಗಿದೆ, ಸೂಕ್ತ ತನಿಖೆ ನಡೆಸಿ: ಮಾಜಿ ಶಾಸಕ ರಾಜೇಗೌಡ ಒತ್ತಾಯ| Speed News Kannada

ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳನ್ನು ತಿದ್ದಿರುವ ಶಂಕೆಗಳಿದ್ದು, ಈ ಬಗ್ಗೆ ನ್ಯಾಯಯುತ ತನಿಖೆಯಾಗಬೇಕು ಎಂದು ಮಾಜಿ ಶಾಸಕ ಟಿ.ಡಿ.ರಾಜೇಗೌಡ ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023 ರ ಮೇ 13 ರಂದು ನಡೆದ ಮತ ಎಣಿಕೆ ಸಂದರ್ಭದಲ್ಲಿ ಮಾನ್ಯವಾಗಿದ್ದ ಅಂಚೆ ಮತಪತ್ರಗಳು, ಮರು ಎಣಿಕೆ ಸಂದರ್ಭದಲ್ಲಿ ಅಮಾನ್ಯವಾಗಿರುವುದು ಅನುಮಾನ ಮೂಡಿಸಿದೆ. ಈ ವಿಚಾರದಲ್ಲಿ ಸತ್ಯಾಂಶ ಹೊರಬರಲು ನ್ಯಾಯಯುತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಆಗ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌‍, ಬಿಜೆಪಿ, ಜೆಡಿಎಸ್‌‍ ಸೇರಿದಂತೆ ಎಲ್ಲಾ ಅಭ್ಯರ್ಥಿಗಳು ಮತ ಎಣಿಕೆ ಸಂದರ್ಭದಲ್ಲಿ ಹಾಜರಿದ್ದರು. ಆಗ ಯಾವುದೇ ಆಕ್ಷೇಪ ವ್ಯಕ್ತಪಡಿಸದೆ ಎಲ್ಲಾ ಏಜೆಂಟರು ಸಹಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಯಾಗಿದ್ದ ನನ್ನನ್ನು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದರು. ನಂತರ ಬಿಜೆಪಿ ಅಭ್ಯರ್ಥಿ ಡಿ.ಎನ್‌.ಜೀವರಾಜ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ಅಮಾನ್ಯವಾಗಿದ್ದ 279 ಅಂಚೆ ಮತಗಳು ಸೇರಿದಂತೆ ಎಲ್ಲ ಅಂಚೆ ಮತಗಳ ಮರು ಎಣಿಕೆಗೆ ಸೂಚಿಸಿತ್ತು.

ಮರು ಎಣಿಕೆ ಸಂದರ್ಭದಲ್ಲಿ ಅಂಚೆ ಮತಪತ್ರಗಳಿದ್ದ ಟ್ರಂಕ್‌ ಸೀಲ್‌ ಓಪನ್‌ ಆಗಿತ್ತು. ಈ ರೀತಿಯ ಅನ್ಯಾಯ ಯಾರಿಗೂ ಆಗಬಾರದು. ನನಗೆ ಆಯೋಗದ ಮೇಲೆ ನಂಬಿಕೆಯಿದೆ. ತಿದ್ದಿರುವ ಮತಪತ್ರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಬೇಕು. ಈ ವಿಚಾರದಲ್ಲಿ ಸರಿಯಾದ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ರಾಜೇಗೌಡ ಅವರ ಏಜೆಂಟ್‌ ಆಗಿದ್ದ ರಾಜ್ಯ ಕಾಂಗ್ರೆಸ್‌‍ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ ಮಾತನಾಡಿ, 2023 ರ ಮೇ 13 ರಂದು ನಡೆದ ಮತ ಎಣಿಕೆ ಸಂದರ್ಭದಲ್ಲೂ ನಾನು ರಾಜೇಗೌಡರ ಚುನಾವಣಾ ಏಜೆಂಟ್‌ ಆಗಿದ್ದೆ. ಆಗ 201 ಮತಗಳ ಅಂತರದಿಂದ ರಾಜೇಗೌಡರು ಜಯ ಗಳಿಸಿದ್ದರು. ನ್ಯಾಯಾಲಯದ ಆದೇಶದಂತೆ ಅಂಚೆ ಮತಗಳ ಮರು ಎಣಿಕೆ ಮಾಡಿದ ಸಂದರ್ಭದಲ್ಲಿ ತಿದ್ದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದರು.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.