2026-05-06 06:15:18

Shocking truth in Mandya 55 underage pregnant women scanned in a single year | ಮಂಡ್ಯದಲ್ಲಿ ಬೆಚ್ಚಿಬೀಳಿಸುವ ಸತ್ಯ ಒಂದೇ ವರ್ಷದಲ್ಲಿ 55 ಅಪ್ರಾಪ್ತ ಗರ್ಭಿಣಿಯರ ಸ್ಕ್ಯಾನಿಂಗ್ | Speed News Kannada

Shocking truth in Mandya 55 underage pregnant women scanned in a single year | ಮಂಡ್ಯದಲ್ಲಿ ಬೆಚ್ಚಿಬೀಳಿಸುವ ಸತ್ಯ ಒಂದೇ ವರ್ಷದಲ್ಲಿ 55 ಅಪ್ರಾಪ್ತ ಗರ್ಭಿಣಿಯರ ಸ್ಕ್ಯಾನಿಂಗ್ | Speed News Kannada

ಮಂಡ್ಯ: ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಮತ್ತು ಲಿಂಗ ಪತ್ತೆಯಂತಹ ಪ್ರಕರಣಗಳ ಬೆನ್ನಲ್ಲೇ ಇದೀಗ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ. ನಗರದ ಪ್ರತಿಷ್ಠಿತ ಡಯಾಗೋಸ್ಟಿಕ್ ಸೆಂಟರ್ ಒಂದರ ಮೇಲೆ ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿದಾಗ, ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 55 ಮಂದಿ ಬಾಲಕಿಯರಿಗೆ ಗರ್ಭಿಣಿ ಸ್ಕ್ಯಾನಿಂಗ್ ಮಾಡಿರುವುದು ಪತ್ತೆಯಾಗಿದೆ. ಈ ಆಘಾತಕಾರಿ ಬೆಳವಣಿಗೆಯಿಂದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಬೆಚ್ಚಿಬಿದ್ದಿದೆ.
16 ಸಾವಿರ ಗರ್ಭಿಣಿಯರ ಪೈಕಿ 55 ಮಂದಿ ಅಪ್ರಾಪ್ತರು ಉಪ ಲೋಕಾಯುಕ್ತರ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ಎಚ್ಚೆತ್ತುಕೊಂಡ ತಾಲೂಕು ಮಟ್ಟದ ಜಾಗೃತ ದಳದ ಅಧಿಕಾರಿಗಳು ಮಂಗಳವಾರ ನಗರದ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಮಿಂಚಿನ ದಾಳಿ ನಡೆಸಿದರು. ತಹಸೀಲ್ದಾರ್ ವಿಶ್ವನಾಥ್ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ತಂಡವು ಮಂಡ್ಯ ಡಯಾಗೋಸ್ಟಿಕ್ ಸೆಂಟರ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ಈ ಗಂಭೀರ ವಿಚಾರ ಬೆಳಕಿಗೆ ಬಂದಿದೆ. ಕಳೆದ ಒಂದು ವರ್ಷದಲ್ಲಿ ಇಲ್ಲಿ ಸುಮಾರು 16 ಸಾವಿರ ಗರ್ಭಿಣಿಯರ ಸ್ಕ್ಯಾನಿಂಗ್ ಮಾಡಲಾಗಿದ್ದು, ಅದರಲ್ಲಿ 55 ಮಂದಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಾಗಿದ್ದಾರೆ.
ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗಿ ಸ್ಕ್ಯಾನಿಂಗ್‌ಗೆ ಬಂದಾಗ ಆ ಮಾಹಿತಿಯನ್ನು ತಕ್ಷಣವೇ ಸಂಬಂಧಪಟ್ಟ ಇಲಾಖೆ ಅಥವಾ ಪೊಲೀಸರಿಗೆ ನೀಡುವುದು ಕಡ್ಡಾಯ. ಒಂದು ವೇಳೆ ಬಾಲಕಿಯರು ವಿವಾಹವಾಗಿದ್ದರೂ ಸಹ, ಅಂತಹ ಪ್ರಕರಣಗಳು ಫೋಕೋ (POCSO) ಕಾಯ್ದೆಯ ಅಡಿಯಲ್ಲಿ ಬರುತ್ತವೆ. ಆದರೆ ಈ ಡಯಾಗೋಸ್ಟಿಕ್ ಸೆಂಟರ್‌ನವರು ಕಾನೂನಿನ ಪ್ರಕಾರ ಮಾಹಿತಿ ನೀಡಿದ್ದಾರೆಯೇ ಅಥವಾ ಈ ಸತ್ಯವನ್ನು ಮುಚ್ಚಿಟ್ಟಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ.
ದಾಳಿಯ ನೇತೃತ್ವ ವಹಿಸಿದ್ದ ನೋಡಲ್ ಅಧಿಕಾರಿ ಡಾ. ಕೆ. ಸೋಮಶೇಖ‌ರ್ ಅವರು ಮಾತನಾಡಿ, ಸ್ಕ್ಯಾನಿಂಗ್‌ ಸೆಂಟರ್‌ನ ರಿಜಿಸ್ಟರ್ ಮತ್ತು ದಾಖಲೆಗಳನ್ನು ಪರಾಮರ್ಶಿಸಲಾಗುತ್ತಿದೆ. ಬಾಲ ಗರ್ಭಿಣಿಯರ ಬಗ್ಗೆ ಮಾಹಿತಿ ನೀಡದಿದ್ದರೆ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ. ಜೊತೆಗೆ ಲಿಂಗಪತ್ತೆ ಮತ್ತು ಭ್ರೂಣ ಹತ್ಯೆಯಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಪ್ರಕರಣವು ಮಂಡ್ಯ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅಥವಾ ಬಾಲ್ಯವಿವಾಹದಂತಹ ಗಂಭೀರ ಸಾಮಾಜಿಕ ಸಮಸ್ಯೆಗಳತ್ತ ಬೆರಳು ಮಾಡಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.