2026-05-20 09:50:12

ಹಗರಣಗಳೇ ಕಾಂಗ್ರೆಸ್‌ ಸರ್ಕಾರದ ಸಾಧನೆ: ಬಿಜೆಪಿ ಮುಖಂಡ ಸಿ.ಟಿ.ರವಿ ಆರೋಪ|Speed News Kannada

ಹಗರಣಗಳೇ ಕಾಂಗ್ರೆಸ್‌ ಸರ್ಕಾರದ ಸಾಧನೆ: ಬಿಜೆಪಿ ಮುಖಂಡ ಸಿ.ಟಿ.ರವಿ ಆರೋಪ|Speed News Kannada

ಬೆಂಗಳೂರು: ಮೂರು ವರ್ಷಗಳಲ್ಲಿ ಸಾಲು ಸಾಲು ಹಗರಣಗಳೇ ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆ ಎಂದು ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.

ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ, ಹಗರಣಗಳೇ ನಿಮ್ಮ ಸಾಧನೆಯೇ? ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿ ರೂ. ಲೂಟಿ ಹೊಡೆದು ನಮ್ಮ ಒಬ್ಬ ಸಚಿವ ಜೈಲಿಗೆ ಹೋಗಿದ್ದು ಸಾಧನೆ.ಎಸ್.ಇ.ಪಿ., ಟಿಎಸ್‍ಪಿ ಹಣ ದುರುಪಯೋಗ ಮಾಡಿಕೊಂಡಿದ್ದೂ ಸಾಧನೆಯೇ ಎಂದು ಕೇಳಿದರು.

ಕೆಎಸ್‍ಆರ್‌ ಟಿಸಿ ನೌಕರರು ಚಳವಳಿಗೆ ಕರೆ ಕೊಟ್ಟಿದ್ದು ಏಕೆ?. ರೈತರ ಪಂಪ್‍ಸೆಟ್‍ಗಳಿಗೆ 3 ಗಂಟೆ 3 ಫೇಸ್ ಕರೆಂಟ್ ಕೊಡಲು ಆಗುತ್ತಿಲ್ಲ. ಇದು ಸಾಧನೆಯೇ? 3 ವರ್ಷದಲ್ಲಿ ಕರ್ನಾಟಕದ ಜನರು ಹೆಮ್ಮೆ ಪಡುವಂತೆ, ತಲೆಯೆತ್ತಿ ನಿಲ್ಲುವಂತೆ, ಇಡೀ ದೇಶದಲ್ಲಿ ಹೇಳಿಕೊಂಡು ಓಡಾಡುವಂತೆ ಯಾವ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಶೇ 60 ಕಮಿಷನ್ ಸಾಧನೆಯೇ? ಸರಕಾರಿ ನೌಕರರ ಆತ್ಮಹತ್ಯೆ ಸಾಧನೆಯೇ? ಎಂದ ಅವರು, ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಎಷ್ಟು ದಿನ ಕುಳಿತಿರುತ್ತಾರೋ ಎಂಬ ಗ್ಯಾರಂಟಿ ಸಿದ್ದರಾಮಯ್ಯನವರಿಗೇ ಇಲ್ಲ ಎಂದು ವ್ಯಂಗ್ಯವಾಡಿದರು. ಅವರ ಕುರ್ಚಿ ಬಗ್ಗೆ ಗ್ಯಾರಂಟಿ ಇಲ್ಲದ ಅವರು, ಇನ್ಯಾವ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ ಎಂದರು.

ರಾಜ್ಯದ ಸಾಲ 10 ಲಕ್ಷ ಕೋಟಿ ರೂಪಾಯಿ. ಸಾಲ ಮಾಡದೇ ಗ್ಯಾರಂಟಿ ಯೋಜನೆ ಕೊಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. ಹೀಗಿರುವಾಗ ಹೆಮ್ಮೆ ಪಟ್ಟುಕೊಳ್ಳುವ ಸಾಧನೆ ಏನಿದೆ ಎಂದು ಕೇಳಿದರು.

ಪೆಟ್ರೋಲ್- ಡೀಸೆಲ್ ಮೇಲೆ ಕರ್ನಾಟಕ ಸರಕಾರ ಹಾಕಿದ ಸೆಸ್ ಜಾಸ್ತಿಯೇ ಅಥವಾ ಕೇಂದ್ರ ಸರಕಾರ ಹಾಕಿದ ಸೆಸ್ ಹೆಚ್ಚೇ ಎಂದು ಪ್ರಶ್ನಿಸಿದರು. ಸರಕಾರ ಪೆಟ್ರೋಲ್- ಡೀಸೆಲ್ ಮೇಲೆ ಮೂರು ಬಾರಿ ಸೆಸ್ ಹಾಕಿದೆ. ಕೇಂದ್ರ ಸರಕಾರ ಬೆಲೆ ಇಳಿಸಿದ ಮೇಲೂ ಸೆಸ್ ಹಾಕಿದ್ದು ಏಕೆ ಎಂದು ಕೇಳಿದರು.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.