ಉಡುಪಿ:ವೈಚಾರಿಕ ಮತ್ತು ವೈಜ್ಞಾನಿಕತೆಯ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಅದರ ಮೂಲ ಉದ್ದೇಶವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕಿಸಾನ್ ಸಭಾ ಸಭಾಂಗಣದ ಉದ್ಘಾಟಿಸಿ, ಟ್ರಸ್ಟ್ ನ ಮಹಾತ್ಮಾ ಗಾಂಧಿ ಪ್ರೌಢ ಶಾಲೆಯ 35 ನೇ ವರ್ಷದ ಸಮಾರಂಭ ವನ್ನು ಉದ್ಘಾಟಿಸಿದ ನಂತರ ಮಾತನಾಡಿದರು.
ಮೊಯಿಲಿ ಪ್ರಾಮಾಣಿಕ ರಾಜಕಾರಣಿ:
ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಾ, ತಾನು ಕುಟುಂಬದ ಮೊದಲ ಪದವೀಧರನಾಗಿದ್ದು, ವೀರಪ್ಪ ಮೊಯಿಲಿಯವರಂತೆ ತಾನೂ ಕಷ್ಟದ ಜೀವನವನ್ನು ಕಂಡಿರುವುದಾಗಿ ತಿಳಿಸಿದರು. ವೀರಪ್ಪ ಮೊಯಿಲಿಯವರು ಸಮಾಜದ ಬಡವರ್ಗದವರ ಪರವಾಗಿ ನಿಂತಿದ್ದರು. ತಮ್ಮ ವಕೀಲ ವೃತ್ತಿಯಲ್ಲಿ ಬಡವರಿಗೆ ಉಚಿತವಾಗಿ ವಕಾಲತ್ತು ಮಾಡುತ್ತಿದ್ದು, ತಮ್ಮ ವಕೀಲ ವೃತ್ತಿ ಹಾಗೂ ರಾಜಕೀಯ ಬದುಕಿನಲ್ಲಿ ಪ್ರಾಮಾಣಿಕತೆಯನ್ನು ಮರೆದಿದ್ದಾರೆ. ಅವರು ಶತಾಯುಷಿಗಳಾಗಿ ಸಮಾಜ ಸೇವೆ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.
ಶಿಕ್ಷಣದಲ್ಲಿ ವೈಜ್ಞಾನಿಕತೆ, ವೈಚಾರಿಕತೆ ಅಗತ್ಯ:
ಕಾರ್ಕಳದಲ್ಲಿ ಕಿಸಾನ್ ಸಭಾ ಪ್ರಾರಂಭಿಸಿ, ನಂತರ ಪ್ರೌಢಶಾಲೆಯನ್ನು ಸ್ಥಾಪಿಸಿ, ನಿರ್ಗತಿಕ ಹಾಗೂ ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣ ನೀಡುವ ಉತ್ತಮ ಕಾರ್ಯದಲ್ಲಿ ವೀರಪ್ಪ ಮೊಯಿಲಿಯವರು ತೊಡಗಿರುವುದು ಸಂತೋಷದ ವಿಷಯ. ಈ ಶಾಲೆಯು 35 ವರ್ಷಗಳನ್ನು ಪೂರೈಸಿದ್ದು, ಇನ್ನೂ ಎತ್ತರಕ್ಕೆ ಬೆಳೆಯುವಂತಾಗಲಿ ಹಾಗೂ ಇಲ್ಲಿನ ವಿದ್ಯಾರ್ಥಿಗಳು ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಯನ್ನು ಅಳವಡಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಶಿಕ್ಷಣದ ಉದ್ದೇಶ ಎಂದರು. 12 ರಿಂದ 15 % ಇದ್ದ ರಾಜ್ಯದಲ್ಲಿ ಸಾಕ್ಷರತೆ ಇಂದು 75 % ಹೆಚ್ಚಿದ್ದರೂ, ಶಿಕ್ಷಣದಲ್ಲಿ ವೈಜ್ಞಾನಿಕತೆ ಹಾಗೂ ವೈಚಾರಿಕತೆ ಇಲ್ಲದಿರುವುದು ಗಮನಿಸಲಾಗಿದೆ ಎಂದರು.
ಸಮಾನ ಅವಕಾಶಗಳನ್ನು ಕೊಡುವುದು ಶಿಕ್ಷಣ ಮೂಲ ಉದ್ದೇಶವಾಗಬೇಕು. ಅಸಮಾನತೆಯಿಂದ ಕೂಡಿದ ಸಮಾಜ ವ್ಯವಸ್ಥೇಯಲ್ಲಿ ಶೂದ್ರ ವರ್ಗ ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿತ್ತು. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗದೇ, ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ವೆಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ತಿಳಿಸಿದ್ದರು.
ಸರ್ಕಾರ ನುಡಿದಂತೆ ನಡೆಯುತ್ತದೆ:
ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ. ಕಾರ್ಕಾಳ ಜನತೆಯ ಬೇಡಿಕೆಗಳನ್ನು ಹಂತ ಹಂತವಾಗಿ ಪೂರೈಸಲಾಗುವುದು. 2013 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ನೀಡಲಾಗಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 2023ರಲ್ಲಿ ಪುನ: ಅಧಿಕಾರಕ್ಕೆ ಬಂದು, 590 ಭರವಸೆಗಳನ್ನು ಕಳೆದ ಎರಡೂವರೆ ವರ್ಷದಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52000 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದ್ದು, ಎಲ್ಲ ಜಾತಿಧರ್ಮಗಳ ಬಡವರಿಗೆ ಗ್ಯಾರಂಟಿಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಎಲ್ಲ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ, ಇದುವರೆಗೆ 1.20 ಲಕ್ಷ ಕೋಟಿಗಳನ್ನು ಗ್ಯಾರಂಟಿಗಳಿಗೆ ನೀಡಲಾಗಿದೆ. ದೇಶದ ಸಂಪತ್ತಿನ ಸಮಾನ ಹಂಚಿಕೆಗೆ ನಮ್ಮ ಪ್ರಯತ್ನ ಸದಾ ಇರಲಿದೆ ಎಂದರು.
ಕಾರ್ಕಳದಲ್ಲಿ 2027ರಲ್ಲಿ ನಡೆಯುವ ಐತಿಹಾಸಿಕ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಅರ್ಥಿಕ ಸಹಾಯವನ್ನು ಇಲ್ಲಿನ ಜನಪ್ರತಿನಿಧಿಗಳು ಕೋರಿದ್ದು, ಈ ಕಾರ್ಯಕ್ರಮಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದರು.