ಇನ್ನೂ ನಿನ್ನೆ ನಡೆದ ಐಪಿಎಲ್ ಎರಡನೇ ಪಂದ್ಯದಲ್ಲೇ ಟಾಸ್ ವಿವಾದ ತಲೆದೋರಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ “ಟಾಸ್ ಫಿಕ್ಸಿಂಗ್” ಆರೋಪ ಕೇಳಿಬಂದಿದೆ.ಟಾಸ್ ವೇಳೆ ಕಾಯಿನ್ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ತೋರಿಸದಿರುವುದು ಈ ವಿವಾದಕ್ಕೆ ಕಾರಣವಾಗಿದೆ. ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಕಾಯಿನ್ ಅನ್ನು ದೂರಕ್ಕೆ ಎಸೆದಿದ್ದು, ಅದು ಬಿದ್ದ ದೃಶ್ಯ ಪ್ರಸಾರವಾಗಿಲ್ಲ. ಇದೇ ವೇಳೆ ಕ್ಯಾಮೆರಾ ಬೇರೆಡೆಗೆ ತಿರುಗಿದ ಕಾರಣ, ಟಾಸ್ ಫಲಿತಾಂಶ ಸ್ಪಷ್ಟವಾಗಿ ಕಾಣಿಸದೇ ಇರುವಾಗಲೇ ರೆಫರಿ ಮುಂಬೈ ಟಾಸ್ ಗೆದ್ದಿದೆ ಎಂದು ಘೋಷಿಸಿದರು.
ಇದಕ್ಕೂ ಮುನ್ನ 2024ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಇಂತಹದೇ ಆರೋಪ ಕೇಳಿಬಂದಿತ್ತು. ಆ ವೇಳೆ ಫಾಫ್ ಡು ಪ್ಲೆಸಿಸ್ ಅವರಿಗೆ ಕಾಯಿನ್ ಪರಿಶೀಲಿಸಲು ಅವಕಾಶ ನೀಡಲಾಗಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ಈ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ “ಟಾಸ್ ಫಿಕ್ಸಿಂಗ್” ಆರೋಪಗಳು ಮತ್ತೆ ಟ್ರೆಂಡ್ ಆಗಿವೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 220 ರನ್ ಗಳಿಸಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ 19.1 ಓವರ್‌ಗಳಲ್ಲಿ ಚೇಸ್ ಮಾಡಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.ಟಾಸ್ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಮತ್ತೆ ಪ್ರಶ್ನೆಗಳು ಉದ್ಭವಿಸಿದ್ದು, ಐಪಿಎಲ್ ನಿರ್ವಹಣೆಯಿಂದ ಸ್ಪಷ್ಟನೆಗಾಗಿ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.