2026-06-08 01:20:27

ಸಾಧನಾ ಸಮಾವೇಶ: ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ |Speed News Kannada

ಸಾಧನಾ ಸಮಾವೇಶ: ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ |Speed News Kannada

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಯಾವ ಸಾಧನೆ ಮಾಡಿದ್ದೀರಿ ಎಂದು ಸಾಧನಾ ಸಮಾವೇಶ ಮಾಡುತ್ತಿದ್ದೀರಿ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಶಾಸಕ, ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಅವರು ಆಕ್ರೋಶ ಹೊರಹಾಕಿದ್ದಾರೆ.

ಯಾವ ಮಹತ್ಸಾಧನೆಗಾಗಿ ಸರ್ಕಾರ ಮೂರು ವರ್ಷದ ಸಾಧನಾ ಸಮಾವೇಶ ಸಂಘಟಿಸುತ್ತಿದೆ?

ಮೂರು ವರ್ಷದ ಆಡಳಿತ ಅವಧಿಯಲ್ಲಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ನಿರುದ್ಯೋಗ ಭಾಗ್ಯ ಕಲ್ಪಿಸಿದ್ದೇ ನಿಮ್ಮ ಸಾಧನೆಯೇ?

ಉತ್ಪನ್ನ ಕ್ಷೇತ್ರವನ್ನು ಉತ್ತೇಜಿಸದೇ ಅಭಿವೃದ್ಧಿಯನ್ನು ಶೂನ್ಯಗೊಳಿಸಿದ್ದು ನಿಮ್ಮ ಸಾಧನೆಯೇ?

ರೈತ ಕಲ್ಯಾಣಕ್ಕಾಗಿ ಯಾವುದೇ ಯೋಜನೆಯನ್ನು ರೂಪಿಸದೇ ನಿರಂತರವಾಗಿ ರೈತ ಹೋರಾಟಗಳನ್ನು ಹತ್ತಿಕ್ಕಿದ್ದು ನಿಮ್ಮ ಸಾಧನೆಯೇ? 

ಮಹಿಳಾ ಕಲ್ಯಾಣಕ್ಕಾಗಿ ಯಾವುದೇ ಕಾರ್ಯಕ್ರಮವನ್ನೂ ಕೊಡಲಿಲ್ಲ, ಗೃಹಲಕ್ಷ್ಮೀ ಯೋಜನೆಯನ್ನೂ ಸಕಾಲದಲ್ಲಿ ತಲುಪಿಸುತ್ತಿಲ್ಲ, ಮಹಿಳೆಯರ ಮೇಲಿನ ದೌರ್ಜನ್ಯ, ನಿರಂತರ ಅತ್ಯಾಚಾರಗಳು ನಿಮ್ಮ ಸರ್ಕಾರದಲ್ಲಿ ಸ್ತ್ರೀ ಕುಲವನ್ನು ಕಾಡಿದ ದೌರ್ಭಾಗ್ಯ. ಇದಕ್ಕಾಗಿ ನಿಮ್ಮ ಸಾಧನಾ ಸಮಾವೇಶವೇ ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.  

ಸೂರುರಹಿತ ಜನರಿಗಾಗಿ ನಿವೇಶನ ಹಂಚಲಿಲ್ಲ, ಮನೆಗಳನ್ನು ವಿತರಿಸಲಿಲ್ಲ, ಮೈಸೂರು ಮುಡಾದಲ್ಲಿ ಸಾವಿರಾರು ನಿವೇಶನಗಳ ಲೂಟಿ ಮಾಡಲಾಗಿದೆ. ಮಹರ್ಷಿ ವಾಲ್ಮೀಕಿ ನಿಗಮದ ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ಕೆ ಮೀಸಲಾಗಿದ್ದ ಹಣವನ್ನು ಬ್ಯಾಂಕ್‌ ಖಾತೆಗೆ ಕನ್ನ ಹಾಕಿ, ಲೂಟಿ ಹೊಡೆದದ್ದು, ಪರಿಶಿಷ್ಟ ಜಾತಿ ಪಂಗಡಗಳ ಕಲ್ಯಾಣ ಕಾರ್ಯದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನೂ ಬಿಡುಗಡೆ ಮಾಡದೇ, ಹಿಂದುಳಿದವರ ಕಲ್ಯಾಣ ಕಾರ್ಯಕ್ಕೆ ಕಲ್ಲು ಹಾಕಿದ್ದು ನಿಮ್ಮ ಸಾಧನೆಯೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಿಂದುಳಿದ ವರ್ಗದ ಆಯೋಗ ಡಾ. ಕಾಂತರಾಜು ಆಯೋಗದ ವರದಿಯನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ. ಒಳ ಮೀಸಲಾತಿ ಹೆಸರಿನಲ್ಲಿ ಪರಿಶಿಷ್ಟ ಸಮುದಾಯಗಳ ನಡುವೆ ಗೊಂದಲ ಉಂಟುಮಾಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಹೆಚ್ಚುವರಿ ಮೀಸಲಾತಿಯನ್ನು ಉಳಿಸಿ ರಕ್ಷಿಸಿಕೊಡದೇ, ಈ ಸಮುದಾಯಗಳ ಸಾಂವಿಧಾನಿಕ ಹಕ್ಕನ್ನು ಕಸಿದಿದ್ದು ನಿಮ್ಮ ಸಾಧನೆಯೇ ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದಾರೆ.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆಶಯಕ್ಕೆ ವಿರುದ್ಧವಾಗಿ, ಪ್ರಜಾಪ್ರಭುತ್ವ ವ್ಯವಸ್ತೆಯ ನಂಬಿಕೆಗೆ ದ್ರೋಹ ಬಗೆದು, ತಳಮಟ್ಟದಿಂದ ಉನ್ನತ ಮಟ್ಟದವರೆಗೆ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಲೂಟಿಕೋರತನ, ಕಮೀಷನ್‌ ದಂಧೆ, ವಿಪರೀತ ಬೆಲೆಯೇರಿಕೆಯ ಬಿಸಿ ನಿಮ್ಮ ಸರ್ಕಾರದ ಕುಖ್ಯಾತಿ ಸಾಧನೆಯ ಕಿರೀಟಕ್ಕೆ ತಗುಲಿಸೊಂಡು ಸಂಘಟಿಸುತ್ತಿರುವ ನಿಮ್ಮ ಸಮಾವೇಶ  ಸಾಧನೆಯದ್ದಲ್ಲ, ಭಂಡತನದ ಪರಾಕಾಷ್ಠೆಯ ಪ್ರದರ್ಶನವಾಗಿದೆ. ನೀವು ಘೋಷಿಸಿರುವ ಸಾಧನೆಗಳೆಲ್ಲವೂ ಕಾಗದ ಮತ್ತು ಜಾಹಿರಾತಿನ ಫಲಕಗಳ ಮೇಲಷ್ಟೇ ಕಾಣುತ್ತಿದೆ ಎಂದು ವಿಜಯೇಂದ್ರ ಲೇವಡಿ ಮಾಡಿದ್ದಾರೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.