ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ 10ನೇ ಆವೃತ್ತಿಯ ಟಿ20 ವಿಶ್ವಕಪ್ ಇದೀಗ ರೋಚಕ ಹಂತಕ್ಕೆ ತಲುಪಿದೆ. ಬ್ಯಾಟರ್‌ಗಳ ಅಬ್ಬರಕ್ಕೆ ಉಪಖಂಡದ ಮೈದಾನಗಳು ಸಾಕ್ಷಿಯಾಗುತ್ತಿದ್ದು ಅತೀ ಹೆಚ್ಚು ರನ್ ಗಳಿಸುವ ಬ್ಯಾಟರ್‌ಗಳ ನಡುವೆ ಭರ್ಜರಿ ಪೈಪೋಟಿ ಆರಂಭವಾಗಿದೆ.ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಪಾಕಿಸ್ತಾನದ ಸಾಹಿಬ್ಜಾದ ಫರ್ಹಾನ್ ರನ್ ಬೇಟೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಈ ಬಾರಿಯ ಟೂರ್ನಿಯಲ್ಲಿ ಕೆನಡಾದ ಯುವ ಆಟಗಾರ ಯುವರಾಜ್ ಸಾಮ್ರಾ ಅಚ್ಚರಿಯ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಕೇವಲ 19ನೇ ವಯಸ್ಸಿನಲ್ಲಿ ಶತಕ (110 ರನ್) ಸಿಡಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಸೆಂಚುರಿ ಬಾರಿಸಿದ ಅತೀ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇನ್ನು ಟೂರ್ನಿಯ ಮೊದಲ ಶತಕ ಶ್ರೀಲಂಕಾದ ಪತುಮ್ ನಿಸ್ಸಾಂಕ ಅವರ ಬ್ಯಾಟ್‌ನಿಂದ ಮೂಡಿಬಂದಿದೆ. ಆಸ್ಟ್ರೇಲಿಯಾ ವಿರುದ್ಧ ಅವರು ಅಜೇಯ 100 ರನ್ ಗಳಿಸಿ ಮಿಂಚಿದ್ದರು.
ಸದ್ಯದ ಅಂಕಿಅಂಶಗಳ ಪ್ರಕಾರ, ಪಾಕಿಸ್ತಾನದ ಸಾಹಿಬ್ಜಾದ ಫರ್ಹಾನ್ 4 ಪಂದ್ಯಗಳಿಂದ 220 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಆರಂಭಿಕ ಆಟಗಾರರು ಎರಡನೇ ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಭಾರತದ ಪರ ಇಶಾನ್ ಕಿಶನ್ ಅಮೋಘ ಫಾರ್ಮ್‌ಲ್ಲಿದ್ದು, ಅಗ್ರ ಐದರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.