ನಟಿ ಕೃಷಿ ತಾಪಂಡ ಮತ್ತು ಎಆರ್‌ವಿ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿ ನಡುವಿನ ವಿವಾದ ಮತ್ತೊಮ್ಮೆ ಹೊಸ ತಿರುವು ಪಡೆದುಕೊಂಡಿದೆ. ಉದ್ಯಮಿ ಅರವಿಂದ್ ರೆಡ್ಡಿಗೆ ಏಳು ಕೋಟಿ ರೂಪಾಯಿ ಹಣ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟಿ ಕೃಷಿ ತಾಪಂಡ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆದಿದ್ದಾರೆ.ಈ ಹಿಂದೆ ನಟಿ ಕೃಷಿ ತಾಪಂಡ, ಉದ್ಯಮಿ ಅರವಿಂದ್ ರೆಡ್ಡಿ ವಿರುದ್ಧ ಮಾನಸಿಕ ಕಿರುಕುಳ ನೀಡಿದ್ದಾಗಿ ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು. ಇದಕ್ಕೆ ಪ್ರತಿಯಾಗಿ ಅರವಿಂದ್ ರೆಡ್ಡಿ, ನಟಿಗಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ದಾಗಿ ಹಾಗೂ ಹಣಕ್ಕಾಗಿ ತಮ್ಮನ್ನು ಬಳಸಿಕೊಂಡಿದ್ದಾರೆ ಎಂದು ಪ್ರತ್ಯಾರೋಪಗಳನ್ನು ಮಾಡಿದ್ದರು. ಇತ್ತೀಚೆಗೆ ಅರವಿಂದ್ ರೆಡ್ಡಿಗೆ ಅನಾಮಿಕ ವ್ಯಕ್ತಿಯಿಂದ ಬೆದರಿಕೆ ಪತ್ರವೊಂದು ಬಂದಿದ್ದು. ಮಹಿಳೆಗೆ ಸಂಬಂಧಿಸಿದ ಪ್ರಕರಣವನ್ನು ಬಗೆಹರಿಸುವ ಜೊತೆಗೆ ಏಳು ಕೋಟಿ ರೂಪಾಯಿ ಹಣ ನೀಡುವಂತೆ ಪತ್ರದಲ್ಲಿ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಅರವಿಂದ್ ರೆಡ್ಡಿ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಆ ಪತ್ರ ಬನಶಂಕರಿಯಿಂದ ಕೊರಿಯರ್ ಮಾಡಲಾಗಿದೆ ಎಂಬುದನ್ನು ಪತ್ತೆಹಚ್ಚಿದ್ದು, ಬಳಿಕ ಮೆಕ್ಯಾನಿಕ್ ಒಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು ವೈಶಾಖ್ ಎಂದು ಗುರುತಿಸಲಾಗಿದ್ದು, ಆತ ನಟಿ ಕೃಷಿ ತಾಪಂಡ ಅವರ ಆಪ್ತ ಎನ್ನಲಾಗಿದೆ. ಪೊಲೀಸರ ತನಿಖೆಯಲ್ಲಿ ವೈಶಾಖ್, ಪತ್ರವನ್ನು ಕೊರಿಯರ್ ಮಾಡಲು ಸೂಚನೆ ನೀಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಅಲ್ಲದೆ, ಆತ ತನ್ನ ಮೊಬೈಲ್ ಫೋನ್ ಅನ್ನು ಕೃಷಿ ತಾಪಂಡ ಮನೆಯಲ್ಲೇ ಅಡಗಿಸಿಟ್ಟಿದ್ದಾನೆ ಎಂಬ ಅನುಮಾನವೂ ಪೊಲೀಸರಿಗೆ ಮೂಡಿದೆ. ಈ ಹಿನ್ನೆಲೆಯಲ್ಲಿ ವೈಶಾಖ್ ಅನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟಿ ಕೃಷಿ ತಾಪಂಡ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಹತ್ವದ ಅಂಶಗಳು ಹೊರಬೀಳುವ ಸಾಧ್ಯತೆ ಇದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.