ಮಹಿಳಾ ಪ್ರೀಮಿಯರ್ ಲೀಗ್ ಅಂತಿಮ ಘಟ್ಟ ತಲುಪಿದ್ದು , ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವೆ ಫೈನಲ್ ಫೈಟ್ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲು ಆರ್‌ಸಿಬಿ ತಯಾರಿ ನಡೆಸಿದ್ರೆ. ಇನ್ನೊಂದೆಡೆ ಆರ್‌ಸಿಬಿಗೆ ಟಕ್ಕರ್ ಕೊಡಲು ಡಿಸಿ ತಂಡ ರಣತಂತ್ರ ಹೆಣೆದಿದೆ.
ಆರ್‌ಸಿಬಿ ಮಹಿಳಾಮಣಿಗಳು ಲೀಗ್ ಹಂತದಲ್ಲಿ 6 ಪಂದ್ಯಗಳನ್ನು ಗೆದ್ದು ನೇರವಾಗಿ ಫೈನಲ್ಗೆ ಅರ್ಹತೆ ಪಡೆದಿದ್ಧಾರೆ. ಇನ್ನೊಂದೆಡೆ, ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿರುವ ದೆಹಲಿ ಕ್ಯಾಪಿಟಲ್ಸ್ ವನಿತೆಯರು ಫೈನಲ್ ಪ್ರವೇಶಿಸಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ತಂಡ ಇದುವರೆಗೆ ಟೂರ್ನಿಯಲ್ಲಿ ಅಧ್ಭುತ ಪ್ರದರ್ಶನ ತೋರಿದ್ರೆ, ಜೆಮಿಮಾ ರಾಡ್ರಿಗಸ್ ನಾಯಕತ್ವದ ದೆಹಲಿ ಕ್ಯಾಪಿಟಲ್ಸ್ ತಂಡ ಕೂಡಾ ಈ ಬಾರಿಯ ಟೂರ್ನಿಯಲ್ಲಿ ಹಲವು ಏಳು-ಬೀಳುಗಳನ್ನು ಕಂಡು ಫೈನಲ್ ಪ್ರವೇಶಿಸಿದೆ.
ಸತತ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿರುವ ದೆಹಲಿ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ತವಕದಲ್ಲಿದೆ. 2ಬಾರಿ ಮುಂಬೈ ಇಂಡಿಯನ್ಸ್ ವಿರುದ್ಧ ಫೈನಲ್‌ನಲ್ಲಿ ಕ್ಯಾಪಿಟಲ್ಸ್ ಸೋಲು ಅನುಭವಿಸಿದ್ರೆ, 1 ಬಾರಿ ಆರ್‌ಸಿಬಿ ಎದುರು ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದೆ. ಹೀಗಾಗಿ, ಆರ್‌ಸಿಬಿ ವಿರುದ್ಧ 2024ರ ಫೈನಲ್ ಸೇಡು ತೀರಿಸಿಕೊಳ್ಳಲು ಕ್ಯಾಪಿಟಲ್ಸ್ ವನಿತೆಯರ ರೆಡಿಯಾಗಿದ್ದಾರೆ.
ಈ ಬಾರಿಯೂ ಗೆಲುವಿನ ಫೆವರೀಟ್ ಎನಿಸಿರುವ ಆರ್‌ಸಿಬಿ ತಂಡ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದದಲ್ಲೂ ಬಲಿಷ್ಠವಾಗಿದೆ. ಆರ್‌ಸಿಬಿ ಗೆಲುವಿಗಾಗಿ ಈಗಾಗಲೇ ಸಾಕಷ್ಟು ಅಭಿಮಾನಿಗಳು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಮಾಡುತಿದ್ದು ಅಭಿಮಾನಿಗಳ ಪ್ರಾರ್ಥನೆ ಸಫಲವಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ. ಆರ್‌ಸಿಬಿಗೆ ಟಕ್ಕರ್ ಕೊಡಲು ಕ್ಯಾಪಿಟಲ್ಸ್ ತಂಡ ಕೂಡಾ ರೆಡಿಯಾಗಿದ್ದು ಸಮಬಲದ ಹೋರಾಟ ನಿರೀಕ್ಷೆ ಮಾಡಬಹುದಾಗಿದೆ. ಹೀಗಾಗಿ ಈ ಬಾರಿ ಯಾರ ಮುಡಿಗೆ WPL ಕಿರೀಟ..? ಅನ್ನೋದಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ಇಂದು ಸಂಜೆ 7.30ಕ್ಕೆ ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ಈ ಫೈನಲ್ ಪಂದ್ಯ ನಡೆಯಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದು.