2026-03-10 04:22:16

Road Accidents | ರಾಜ್ಯದಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು ಓರ್ವ ಸಾವು ಮೂವರಿಗೆ ಗಂಭೀರ ಗಾಯ | Speed News Kannada

Road Accidents | ರಾಜ್ಯದಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು ಓರ್ವ ಸಾವು ಮೂವರಿಗೆ ಗಂಭೀರ ಗಾಯ | Speed News Kannada

ಬೆಂಗಳೂರು, ಮಾರ್ಚ್ 08: ಬೆಂಗಳೂರು, ನೆಲಮಂಗಲ ಮತ್ತು ತುಮಕೂರಿನಲ್ಲಿ ಭಾನುವಾರ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಒಬ್ಬರು ಮೃತಪಟ್ಟರೆ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂರೂ ಪ್ರಕರಣಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣಗಳು ಸಂಬಂಧಿತ ಠಾಣೆಗಳಲ್ಲಿ ದಾಖಲಾಗಿವೆ. ಕಾರು-ಬೈಕ್ ಮುಖಾಮುಖಿ ಬೆಂಗಳೂರಿನ ಜಯಮಹಲ್ ಮೊದಲನೇ ಕ್ರಾಸ್‌ನಲ್ಲಿ ಇನ್ನೊವಾ ಕಾರು ಚಾಲಕನಿಂದ ಹಿಟ್ ಅಂಡ್ ರನ್ ಘಟನೆ ನಡೆದಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಕಾರು ಬೈಕ್ ಅನ್ನು ಕೆಲ ದೂರ ಎಳೆದೊಯ್ದಿದೆ. ಪರಿಣಾಮ ಬೈಕ್‌ನಲ್ಲಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್‌ನಿಂದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟುಹೋಗಿದೆ. ಘಟನೆ ಆರ್.ಟಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸ್ಥಳೀಯ ನಿವಾಸಿ ಗೌರಿ ಮಾಹಿತಿ ನೀಡಿದಂತೆ, ಇನೋವಾ ಕ್ರಿಸ್ಟಾ ಕಾರು ಬೈಕ್‌ಗೆ ಟಚ್ ಆಗಿ ಚಾಲಕ ವಾಹನವನ್ನು ನಿಲ್ಲಿಸದೇ ಮುಂದಕ್ಕೆ ಸಾಗಿದ್ದಾನೆ. ಕಾರಿನ ಸೈಡ್‌ಗೆ ಬೈಕ್ ಸಿಕ್ಕಿಕೊಂಡು ಎಳೆದೊಯ್ಯುವ ವೇಳೆ ಪೆಟ್ರೋಲ್ ಲೀಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಗಾಯಾಳು ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ನ್ಯಾಯಾಧೀಶರ ಕಾರಿಗೆ ಆ್ಯಕ್ಸಿಡೆಂಟ್ ಇನ್ನು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿ ಹೈಕೋರ್ಟ್ ನ್ಯಾಯಾಧೀಶ ಬಸವರಾಜು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅಪರಿಚಿತ ವ್ಯಕ್ತಿ ಅಡ್ಡ ಬಂದ ಹಿನ್ನೆಲೆಯಲ್ಲಿ ತಪ್ಪಿಸಲು ಹೋಗಿ ಪೊಲೀಸ್ ಎಸ್ಕಾರ್ಟ್ ವಾಹನ ಸಿಮೆಂಟ್ ಫ್ಯಾಬ್‌ ಗೆ ಡಿಕ್ಕಿ ಹೊಡೆದಿದೆ. ಬಳಿಕ ನ್ಯಾಯಾಧೀಶರ ಕಾರು ಎಸ್ಕಾರ್ಟ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪೊಲೀಸ್ ವಾಹನದ ಚಾಲಕನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಯಾಧೀಶರು ಸೇರಿದಂತೆ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತಕ್ಕೆ ಯುವಕ ಬಲಿ ಇದೇ ವೇಳೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಂಬಯ್ಯನಪಾಳ್ಯ ಗೇಟ್ ಬಳಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾರಾಯಣ (35) ಮೃತಪಟ್ಟಿದ್ದಾರೆ. ಕೊರಟಗೆರೆ ತಾಲೂಕಿನ ಮಲ್ಲೇಕಾವು ಗ್ರಾಮದ ನಿವಾಸಿಯಾಗಿದ್ದ ಅವರು ಮಧುಗಿರಿಯಿಂದ ತುಮಕೂರು ಕಡೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.