ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಅದರ ಪರಿಣಾಮಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ ವೈದ್ಯರು ಗಂಭೀರ ಎಚ್ಚರಿಕೆ ನೀಡಿದ್ದು, ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ವೈದ್ಯರ ಮಾಹಿತಿಯ ಪ್ರಕಾರ, ಈ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳ ಪ್ರಮಾಣ ಹೆಚ್ಚಾಗಿದೆ. ವಿಶೇಷವಾಗಿ ಡಿಹೈಡ್ರೇಷನ್, ಹೀಟ್ ಎಕ್ಸಾಶನ್ ಮತ್ತು ಹೀಟ್ ಸ್ಟ್ರೋಕ್ ಪ್ರಕರಣಗಳು ಆಸ್ಪತ್ರೆಗಳಲ್ಲಿ ಹೆಚ್ಚಾಗಿ ದಾಖಲಾಗುತ್ತಿವೆ. ಉಷ್ಣತೆ ಹೆಚ್ಚಾದಂತೆ ದೇಹದ ನೀರಿನ ಪ್ರಮಾಣ ವೇಗವಾಗಿ ಕಡಿಮೆಯಾಗುವುದರಿಂದ ದೇಹದ ಸಾಮಾನ್ಯ ಕಾರ್ಯವಿಧಾನಕ್ಕೆ ಅಡ್ಡಿಯಾಗುತ್ತದೆ. ಮಕ್ಕಳು ಮತ್ತು ವೃದ್ಧರ ದೇಹಗಳಲ್ಲಿ ತಾಪಮಾನ ನಿಯಂತ್ರಣ ಸಾಮರ್ಥ್ಯ ಕಡಿಮೆ ಇರುವುದರಿಂದ ಅವರು ಬಿಸಿಲಿನ ಪರಿಣಾಮಕ್ಕೆ ಶೀಘ್ರ ಒಳಗಾಗುತ್ತಾರೆ. 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ ಮಧುಮೇಹ ಮತ್ತು ಹೃದಯ ರೋಗಗಳು ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ.
ಮಧ್ಯಾಹ್ನ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಿಸಿಲಿನ ತೀವ್ರತೆ ಗರಿಷ್ಠವಾಗಿರುತ್ತದೆ. ಈ ಸಮಯದಲ್ಲಿ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ. ಅಗತ್ಯವಿದ್ದರೆ ಮಾತ್ರ ಹೊರಗೆ ತೆರಳಿ, ನೆರಳಿನಲ್ಲಿ ವಿಶ್ರಾಂತಿ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಸಕ್ರಾ ವರ್ಲ್ಡ್ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಹಿರಿಯ ಸಲಹೆಗಾರ ಡಾ. ಎಂ. ರವಿ ಕುಮಾರ್ ಅವರು ಮಾತನಾಡಿ, “ದೇಹಕ್ಕೆ ಕೇವಲ ನೀರು ಕುಡಿಯುವುದು ಮಾತ್ರ ಸಾಕಾಗುವುದಿಲ್ಲ. ಬೆವರು ಮೂಲಕ ದೇಹದಿಂದ ಹೊರ ಹೋಗುವ ಉಪ್ಪು ಮತ್ತು ಖನಿಜಾಂಶಗಳನ್ನು (ಎಲೆಕ್ಟ್ರೋಲೈಟ್ಸ್) ಕೂಡ ಪೂರೈಸಬೇಕು. ಎಳನೀರು, ಮಜ್ಜಿಗೆ, ನಿಂಬೆ ಶರಬತ್ತು ದೇಹವನ್ನು ತಂಪಾಗಿಡುವ ಜೊತೆಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ” ಎಂದು ಹೇಳಿದರು. ಇದರ ಜೊತೆಗೆ ದಿನಪೂರ್ತಿ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.