ಕರಾಚಿ : ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ಮೆಗಾಸಿಟಿ ಕರಾಚಿಯಲ್ಲಿರುವ ಅಮೆರಿಕದ ದೂತಾವಾಸ ಕಚೇರಿಯ ಹೊರಗೆ ಇಂದು (ಮಾ.2) ಇರಾನ್ ಪರ ಬೃಹತ್ ಪ್ರತಿಭಟನೆ ನಡೆದಿದ್ದು ಹಿಂಸಾಸ್ವರೂಪಕ್ಕೆ ತಿರುಗಿದ್ದು, ಈ ವೇಳೆ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ನಾವು ಕನಿಷ್ಠ ಎಂಟು ಶವಗಳನ್ನು ಕರಾಚಿಯ ನಾಗರಿಕ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದೇವೆ, ಕಾನ್ಸುಲೇಟ್ ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ ಎಂದು ಎಧಿ ಫೌಂಡೇಶನ್ ರಕ್ಷಣಾ ಸೇವೆಯ ವಕ್ತಾರ ಮುಹಮ್ಮದ್ ಅಮೀನ್ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯ ನಂತರ ನೂರಾರು ಇರಾನ್ ಪರ ಪ್ರತಿಭಟನಾಕಾರರು ದೂತಾವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು.ಯುವಕರ ಗುಂಪೊಂದು ಮುಖ್ಯ ದ್ವಾರವನ್ನು ಹತ್ತಿ ಕಾನ್ಸುಲರ್ ಕಟ್ಟಡದ ಡ್ರೈವ್‌ವೇಗೆ ನುಗ್ಗಿ ದಾಂಧಲೆ ಸೃಷ್ಟಿಸಿದ್ದರು. ಈ ವೇಳೆ ಗಲಭೆ ನಿಯಂತ್ರಿಸಲು ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಎಂಟು ಜನ ಮೃತಪಟ್ಟಿದ್ದಾರೆ.