ಬೆಂಗಳೂರು: ನವೀಕರಿಸಬಹುದಾದ ಇಂಧನ ವಲಯವು ವೇಗವಾಗಿ ಬೆಳೆಯುತ್ತಿದ್ದು, ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕ್ರೆಡಲ್) ದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಹೇಳಿದ್ದಾರೆ.
ಕ್ರೆಡಲ್ ಹಾಗೂ ಇಂಡಿಯನ್ ವಿಂಡ್ ಪವರ್ ಅಸೋಸಿಯೇಷನ್ (ಐಡಬ್ಲ್ಯೂಪಿಎ) ಸಹಯೋಗದೊಂದಿಗೆ ಆಯೋಜಿಸಿದ್ದ 'ಗ್ರೀನಿಂಗ್ ಯಂಗ್ ಮೈಂಡ್ಸ್' ಇಂಟರ್ನ್‌ಶಿಪ್ ನಲ್ಲಿ ಪಾಲ್ಗೊಂಡಿದ್ದ ರಾಯಚೂರಿನ ಯುಎಎಸ್ ಕೃಷಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ನಾಗರಬಾವಿಯಲ್ಲಿರುವ ಕ್ರೆಡಲ್ ನ ಕೇಂದ್ರ ಕಚೇರಿಯಲ್ಲಿ ಪ್ರಮಾಣಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
"ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಯುವ ಪೀಳಿಗೆಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿವೆ. ಅದಕ್ಕೆ ಪೂರಕವಾಗಿ ಇಂಟರ್ನ್‌ಶಿಪ್ ಹಮ್ಮಿಕೊಳ್ಳಲಾಗಿತ್ತು. ಯುವ ಸಮುದಾಯ ಈ ಅವಕಾಶವನ್ನು ಬಳಸಿಕೊಳ್ಳಬೇಕು. ಆ ಮೂಲಕ ಭವಿಷ್ಯದ ಇಂಧನವಾಗಿರುವ ನವೀಕರಿಸಬಹುದಾದ ಇಂಧನದ ಉತ್ಪಾದನೆ, ಸಂಶೋಧನೆ, ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು," ಎಂದರು.
"30 ವರ್ಷಗಳ ಹಿಂದೆ, 1986 ರಲ್ಲಿ ಕೃಷಿ ಇಂಜಿನಿಯರಿಂಗ್ ಅಧ್ಯಯನ ಮಾಡುವಂತೆ ಹಿರಿಯರು ನನಗೆ ಸಲಹೆ ನೀಡಿದ್ದರು. ಆಗ ಕೋರ್ಸಿನ ವ್ಯಾಪ್ತಿಯು ಸೂಕ್ಷ್ಮ ನೀರಾವರಿ ಯೋಜನೆಗಳಂತಹ ಕ್ಷೇತ್ರಗಳಿಗೆ ಸೀಮಿತವಾಗಿತ್ತು. ಆದರೆ, ಇಂದು ಈ ವಲಯವು ವಿಕಸನಗೊಂಡಿದೆ . ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೃಷಿ ಮತ್ತು ಇಂಜಿನಿಯರಿಂಗ್ ಎರಡರಲ್ಲೂ ಪ್ರವೀಣರಾಗುವುದರಿಂದ ಅವರಿಗೆ ಔದ್ಯೋಗಿಕ ಅವಕಾಶಗಳು ಹೆಚ್ಚಾಗಿರುತ್ತವೆ," ಎಂದು ತಿಳಿಸಿದರು.
ಇಂಡಿಯನ್ ವಿಂಡ್ ಪವರ್ ಅಸೋಸಿಯೇಷನ್ ಅಧ್ಯಕ್ಷ ಯು.ಬಿ. ರೆಡ್ಡಿ ಮಾತನಾಡಿ, "ಶೈಕ್ಷಣಿಕ ಅವಧಿಯಲ್ಲಿ ಶಿಸ್ತು ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸಲು ಹಿಂಜರಿಯುವ ಬದಲು ಆತ್ಮವಿಶ್ವಾಸದಿಂದ ಮುಂದುವರಿದರೆ ಯಶಸ್ಸು ಸಿಗುತ್ತದೆ," ಎಂದು ಹೇಳಿದರು.
ಇಂಟರ್ನ್‌ಶಿಪ್ ವಿಶೇಷತೆ:
ರಾಯಚೂರು ಯುಎಎಸ್ ಕೃಷಿ ಎಂಜಿನಿಯರಿಂಗ್ ಕಾಲೇಜಿನ ಒಟ್ಟು 43 ವಿದ್ಯಾರ್ಥಿಗಳು 2026ರ ಏಪ್ರಿಲ್ 13 ರಿಂದ ಮೇ 11ರವರೆಗೆ ನಾ ಕ್ರೆಡಲ್ ಕೇಂದ್ರ ಕಚೇರಿ ಆವರಣದಲ್ಲಿ ನವೀಕರಿಸಬಹುದಾದ ಇಂಧನದ ಕುರಿತು ತರಬೇತಿ ನೀಡಲಾಗಿತ್ತು. ಎನರ್ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕ್ರೆಡಲ್ ಸಹಯೋಗದೊಂದಿಗೆ ಪ್ರತಿನಿತ್ಯ ತಾಂತ್ರಿಕ ವಿಷಯಗಳ ಕುರಿತು ಮಾಹಿತಿ ಒದಗಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ವಿವಿಧ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ಪ್ರಾಯೋಗಿಕ ಪರಿಚಯ ನೀಡುವುದು, ಶೈಕ್ಷಣಿಕ ಅಧ್ಯಯನ ಮತ್ತು ನಿಜ ಜೀವನದಲ್ಲಿ ಆ ಜ್ಞಾನದ ಬಳಕೆ ಸಾಧ್ಯವಾಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಲ್ಲದೆ, ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ ಕುರಿತ ಅರಿವು ಹೆಚ್ಚಿಸುವುದು ಹಾಗೂ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಆಸಕ್ತಿ ಮತ್ತು ವೃತ್ತಿಪರ ಅವಕಾಶಗಳ ಮೇಲೆ ಬೆಳಕು ಚೆಲ್ಲುವುದು ಈ ಇಂಟರ್ನ್‌ಶಿಪ್ ಉದ್ದೇಶವಾಗಿತ್ತು.