ನವದೆಹಲಿ: ಇಂಧನ ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರು ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನುಶೇ.50ರಷ್ಟು ಕಡಿಮೆ ಮಾಡಿದ್ದಾರೆ. ಪ್ರಧಾನಿ ಅವರ ಇತ್ತೀಚಿನ ಭೇಟಿಗಳಲ್ಲಿ ಬೆಂಗಾವಲು ಪಡೆಯ ವಾಹನಗಳನ್ನು ಕಡಿತಗೊಳಿಸಲಾಗಿದೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.
ತಮ್ಮ ಬೆಂಗಾವಲು ಪಡೆಯಲ್ಲಿ ಸಾಧ್ಯವಾದಷ್ಟು ವಿದ್ಯುತ್ ಚಾಲಿತ ವಾಹನಗಳನ್ನು ಬಳಸಿಕೊಳ್ಳವಂತೆಯೂ ಪ್ರಧಾನಿ ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಸ್‌ಪಿಜಿ ಶಿಷ್ಟಾಚಾರದ ಪ್ರಕಾರ ಅಗತ್ಯ ಭದ್ರತೆಯನ್ನು ಕಾಯ್ದುಕೊಳ್ಳಲಾಗಿದೆ.
ಮೋದಿ ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಇಂಧನ ಉಳಿತಾಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನೀಡಿದ್ದರು. ನಂತರ ಅವರ ಗುಜರಾತ್ ಹಾಗೂ ಅಸ್ಸಾಂ ಪ್ರವಾಸದಲ್ಲಿ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿತ್ತು.
ಇರಾನ್ ಇರಾಕ್ ಯುದ್ಧ ಆರಂಭವಾದ ನಂತರ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದ ಪರಿಣಾಮ ಜಾಗತಿಕ ತೈಲ ಪೂರೈಕೆ ಸರಪಳಿಗೆ ಅಡಚಣೆಯಾಗಿದೆ. ಇದರಿಂದಾಗಿ ಇಂಧನ ಬಿಕ್ಕಟ್ಟು ಎದುರಾಗಿದೆ. ಇದೇ ಮಾದರಿಯನ್ನು ಅನುಸರಿಸುವಂತೆ ಕೇಂದ್ರ ಸಚಿವರು ಮತ್ತು ಎನ್‌ಡಿಎ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪ್ರಧಾನಿ ಸೂಚನೆ ನೀಡಿದ್ದಾರೆ.
ವಿದೇಶಿ ವಿನಿಮಯ ಸಂಗ್ರಹದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಒಂದು ವರ್ಷದವರೆಗೆ ಚಿನ್ನ ಖರೀದಿ ಮಾಡಬೇಡಿ. ವಿದೇಶಿ ಪ್ರವಾಸವನ್ನು ಒಂದು ವರ್ಷ ಮುಂದೂಡಿ, ವರ್ಕ್ ಫ್ರಂ ಹೋಮ್ ಮತ್ತು ಆನ್ ಲೈನ್ ಮೂಲಕ ಪಾಠ ಪ್ರವಚನ ಮಾಡುವಂತೆಯೂ ಸಲಹೆ ನೀಡಿದ್ದರು.