ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಅಭಿಷೇಕ್ ಪೊರೆಲ್ ಅವರನ್ನು ಬಂಧಿಸಿ, ಅವರ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳುವಂತೆ ಕೋಲ್ಕತ್ತ ಹೈಕೋರ್ಟ್ ಮೊಗ್ರಾ ಪೊಲೀಸರಿಗೆ ಆದೇಶಿಸಿದೆ. ಜುಲೈ 14ರಂದು ಹೊರಡಿಸಿದ ಆದೇಶದಲ್ಲಿ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ, ಅಭಿಷೇಕ್ ಪೋರೆಲ್ ಅವರನ್ನು ಪತ್ತೆಹಚ್ಚಿ ಮತ್ತು ಬಂಧಿಸುವಂತೆ ಮೊಗ್ರಾ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ತೃತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಅಭಿಷೇಕ್ ಪೋರೆಲ್ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಹಾಗೂ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಮಾಡಿ, ದೂರು ದಾಖಲಿಸಿದ್ದಾರೆ.
ಆರೋಪಿತ ವ್ಯಕ್ತಿಯಿಂದ ಯಾವುದೇ ರೀತಿಯ ಖಾಸಗಿ ಡೇಟಾ ಅಥವಾ ಫೋಟೊಗಳು ದುರುಪಯೋಗವಾಗದಂತೆ ತಡೆಯಲು ಅಭಿಷೇಕ್ ಪೋರೆಲ್ ಅವರನ್ನು ತಕ್ಷಣವೇ ಬಂಧಿಸುವಂತೆ ಮತ್ತು ಅವರ ಎಲೆಕ್ಟ್ರಾನಿಕ್ ಸಾಧನಗಳನ್ನು (ಫೋನ್, ಲ್ಯಾಪ್‌ಟಾಪ್ ಇತ್ಯಾದಿ) ವಶಪಡಿಸಿಕೊಳ್ಳುವಂತೆ ಮೊಗ್ರಾ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿದೆ. ಯುವತಿಯ ಖಾಸಗಿ ಫೋಟೊಗಳು ಪ್ರಸಾರವಾಗುವುದನ್ನು ತಡೆಯುವ ಉದ್ದೇಶದಿಂದ ಕೋರ್ಟ್ ಈ ಆದೇಶ ಹೊರಡಿಸಿದೆ. ತನಿಖೆ ಮುಂದುವರಿದಿದೆ ಹಾಗೂ ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.