2026-07-23 12:15:11

Ranji Trophy | ಕರ್ನಾಟಕ ವಿರುದ್ಧ ಪಂಜಾಬ್‌ಗೆ ದಿನದ ಗೌರವ | Speed News Kannada

Ranji Trophy | ಕರ್ನಾಟಕ ವಿರುದ್ಧ ಪಂಜಾಬ್‌ಗೆ ದಿನದ ಗೌರವ | Speed News Kannada

ಮೊಹಾಲಿ ಭರವಸೆಯ ಬೌಲರ್‌ಗಳಾದ ವಿದ್ಯಾಧರ್ ಪಾಟೀಲ್ ಹಾಗೂ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ಬಿಗುವಿನ ದಾಳಿಯ ನೆರವಿನಿಂದ ಕರ್ನಾಟಕ ರಣಜಿ ಟ್ರೋಫಿಯ ಎಲೈಟ್ ಬಿ ಗುಂಪಿನ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಸ್ಪರ್ಧಾತ್ಮಕ ಮೊತ್ತಕ್ಕೆ ಕಟ್ಟಿ ಹಾಕುವತ್ತ ಚಿತ್ತ ನೆಟ್ಟಿದೆ.ಗುರುವಾರದಿಂದ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಪಂಜಾಬ್ ತಂಡ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಪಂಜಾಬ್ ಆರಂಭ ಕಳಪೆಯಾಗಿತ್ತು. ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ಪ್ರಭಸಿಮ್ರನ್ ಸಿಂಗ್ (5) ವಿದ್ಯಾಧ‌ರ್ ಪಾಟೀಲ್ ತೋಡಿದ ಖೆಡ್ಡಾಗೆ ಬಲಿಯಾದರು. 6 ರನ್‌ಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅಭಿಜಿತ್ ಗರಗ್ ಹಾಗೂ ಉದಯ್ ಸಹರಾನ್ ಜೋಡಿ ಆಧಾರವಾಯಿತು.
ಆರಂಭದ ನಾಲ್ಕನೇ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ತಂಡಕ್ಕೆ ನಾಯಕ ಹಾಗೂ ಆರಂಭಿಕ ಆಟಗಾರ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 102 ರನ್ ಸೇರಿಸಿತು. ಈ ವೇಳೆ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 44 ರನ್ ಬಾರಿಸಿದ್ದ ಉದಯ್ ಸಹರಾನ್ ಔಟ್ ಆದರು. ಇವರು ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಅಶನ್‌ಪ್ರೀತ್ ಸಿಂಗ್‌, ಅನ್ನೋಲ್‌ಪ್ರೀತ್ ಸಿಂಗ್ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಅನ್ನೋಲ್ ಮಲ್ಲೊತ್ರಾ ದೊಡ್ಡ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಆದರೆ ಇವರ ಆಟ 25 ರನ್‌ಗಳಿಗೆ ಕೊನೆಯಾಯಿತು.ಎಮನ್‌ಜೋತ್ ಸಿಂಗ್ ಹೋರಾಟ
ಆರಂಭಿಕ ಅಭಿಜಿತ್ ಗರಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ನೆರವಾದರು. ಇವರು 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 81 ರನ್ ಸಿಡಿಸಿ ಔಟ್ ಆದರು.
7ನೇ ವಿಕೆಟ್‌ಗೆ ಎಮನ್‌ಜೋತ್ ಸಿಂಗ್ ಚಾಹಲ್ ಮತ್ತು ಆಯುಷ್ ಗೋಯಲ್ ಜೋಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿತು. ಈ ಜೋಡಿ 81 ರನ್ ಸೇರಿಸಿತು. 249 ರನ್ ಸೇರಿಸಿದ್ದಾಗ ಆಯುಷ್ ಗೋಯಲ್ 23 ರನ್ ಬಾರಿಸಿ ಔಟ್ ಆದರು. ಎಮನ್‌ಜೋತ್ ಸಿಂಗ್ ಚಾಹಲ್ ದಿನದಾಟದ ಅಂತ್ಯದವರೆಗೂ ವಿಕೆಟ್ ನೀಡದಂತೆ ಕಾಯ್ದುಕೊಂಡರು. ಅಲ್ಲದೆ 8 ಬೌಂಡರಿ, 1 ಸಿಕ್ಸ‌ರ್ ನೆರವಿನಿಂದ ಅಜೇಯ 77 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಂತಿಮವಾಗಿ ಪಂಜಾಬ್ ದಿನದಾಟದಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 303 ರನ್ ಕಲೆ ಹಾಕಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.