2026-07-27 02:10:27

Ramayana trailer leaked | ರಾಮಾಯಣ ಟ್ರೈಲರ್ ಲೀಕ್! ಕಾಮಿಕ್ ಕಾನ್ ಬಳಿಕ ಆನ್‌ಲೈನ್‌ನಲ್ಲಿ ವೈರಲ್ ಚಿತ್ರತಂಡಕ್ಕೆ ಬಿಗ್ ಶಾಕ್ | SNK

Ramayana trailer leaked | ರಾಮಾಯಣ ಟ್ರೈಲರ್ ಲೀಕ್! ಕಾಮಿಕ್ ಕಾನ್ ಬಳಿಕ ಆನ್‌ಲೈನ್‌ನಲ್ಲಿ ವೈರಲ್ ಚಿತ್ರತಂಡಕ್ಕೆ ಬಿಗ್ ಶಾಕ್ | SNK

'ರಾಮಾಯಣ'  ಸಿನಿಮಾ ಇನ್ನೂ ಟ್ರೈಲರ್ ಅಧಿಕೃತವಾಗಿ ಬಿಡುಗಡೆಯಾಗುವ ಮೊದಲುವೇ ಆನ್‌ಲೈನ್ ಲೀಕ್ ಆಗಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಪ್ರದರ್ಶಿಸಲಾದ ದೃಶ್ಯಗಳ ಜೊತೆಗೆ ಈ ಹಿಂದೆ ವಿವಿಧ ಕಾರ್ಯಕ್ರಮಗಳಲ್ಲಿ ತೋರಿಸಿದ್ದ ಕ್ಲಿಪ್‌ಗಳನ್ನು ಜೋಡಿಸಿ ಕೆಲ ನೆಟ್ಟಿಗರು ಸುಮಾರು ಎರಡು ನಿಮಿಷಗಳ ಟ್ರೈಲರ್‌ನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿರುವ 'ರಾಮಾಯಣ'ವನ್ನು ವಿಶ್ವಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಭರ್ಜರಿ ಸಿದ್ಧತೆ ನಡೆಸಿದೆ. ರಣಬೀರ್ ಕಪೂರ್, ಯಶ್ ಹಾಗೂ ಇಡೀ ತಂಡ ವಿದೇಶಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಇತ್ತೀಚೆಗೆ ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಚಿತ್ರದ ವಿಶೇಷ ಪ್ರಸ್ತುತಿ ಗಮನ ಸೆಳೆದಿತ್ತು. ಆದರೆ ಅದೇ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಅನ್‌ರಿಲೀಸ್ ದೃಶ್ಯಗಳು ಈಗ ಆನ್‌ಲೈನ್‌ಗೆ ಸೋರಿಕೆಯಾಗಿವೆ.

ಜುಲೈ 18ರಂದು ನವದೆಹಲಿಯಲ್ಲಿ ನಡೆದ 'ಪ್ರಥಮ ಸಂಕಲ್ಪ' ಕಾರ್ಯಕ್ರಮದಲ್ಲೂ ಟ್ರೈಲರ್‌ನ ಕೆಲವು ದೃಶ್ಯಗಳನ್ನು ಪ್ರದರ್ಶಿಸಲಾಗಿತ್ತು. ಆ ಸಂದರ್ಭದಲ್ಲೂ ಕೆಲ ಕ್ಲಿಪ್‌ಗಳು ಸೋರಿಕೆಯಾಗಿದ್ದವು. ಬಳಿಕ ಕಾಮಿಕ್-ಕಾನ್‌ನ ದೃಶ್ಯಗಳೂ ಲೀಕ್ ಆದ ಹಿನ್ನೆಲೆಯಲ್ಲಿ, ಎಕ್ಸ್‌ (X) ಬಳಕೆದಾರರೊಬ್ಬರು ವಿವಿಧ ಲೀಕ್ ವಿಡಿಯೊಗಳನ್ನು ಒಟ್ಟುಗೂಡಿಸಿ ಸಂಪೂರ್ಣ ಟ್ರೈಲರ್ ಮಾದರಿಯ ವಿಡಿಯೊ ಸಿದ್ಧಪಡಿಸಿ ಹಂಚಿಕೊಂಡಿದ್ದಾರೆ. ಈ ಲೀಕ್ ಟ್ರೈಲರ್ ಅಧಿಕೃತ ಆವೃತ್ತಿಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಆದರೂ ದೃಶ್ಯಗಳ ಗುಣಮಟ್ಟ ಹಾಗೂ ಅದ್ಧೂರಿತನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಧಿಕೃತ ಟ್ರೈಲರ್ ಅನ್ನು ಶೀಘ್ರ ಬಿಡುಗಡೆ ಮಾಡುವಂತೆ ನಿರ್ಮಾಪಕರಿಗೆ ಒತ್ತಾಯಿಸುತ್ತಿದ್ದಾರೆ.

ಚಿತ್ರದ ಟ್ರೈಲರ್ ಕೆಲ ದಿನಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದರು. ವಿದ್ಯಾರ್ಥಿ ಪ್ರತಿಭಟನೆಗಳ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲಾಗಿದೆ ಎಂಬ ಮಾತುಗಳು ಹರಿದಾಡಿದರೂ, ಅಧಿಕೃತ ಪ್ರಕಟಣೆಯಲ್ಲಿ ಅಂತಹ ಯಾವುದೇ ಕಾರಣವನ್ನು ಉಲ್ಲೇಖಿಸಲಾಗಿರಲಿಲ್ಲ. ನಿತೇಶ್ ತಿವಾರಿ ನಿರ್ದೇಶನದ ಈ ಮಹತ್ವಾಕಾಂಕ್ಷೆಯ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಸನ್ನಿ ಡಿಯೋಲ್ ಹನುಮಂತನಾಗಿ ಅಭಿನಯಿಸಿದ್ದಾರೆ. ನಮಿತ್ ಮಲ್ಹೋತ್ರಾ ನಿರ್ಮಿಸಿರುವ ಈ ಚಿತ್ರ ಭಾರತೀಯ ಸಿನಿರಂಗದ ಬಹು ನಿರೀಕ್ಷಿತ ಪ್ರಾಜೆಕ್ಟ್ ಆಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.