ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಎಲೆಕ್ನಿಕ್ ಬಸ್‌ಗಳಿಂದ ಅಪಘಾತಗಳು ಮತ್ತು ಬ್ರೇಕ್ ಫೇಲ್ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಎರಡನೇ ಬಾರಿ ಪತ್ರ ಬರೆದಿದ್ದಾರೆ.ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಬಿಎಂಟಿಸಿಯಲ್ಲಿ 6 ಸಾವಿರಕ್ಕೂ ಹೆಚ್ಚು ಬಸ್‌ಗಳಿದ್ದು, ಅದರಲ್ಲಿ ಸುಮಾರು 1,700 ಎಲೆಕ್ನಿಕ್ ಬಸ್‌ಗಳಿವೆ. ಪ್ರತಿದಿನ ಲಕ್ಷಾಂತರ ಜನರು ಬಿಎಂಟಿಸಿ ಬಸ್ ಗಳನ್ನೇ ನಂಬಿದ್ದಾರೆ. ಆದರೆ ಇತ್ತೀಚೆಗೆ ಇವಿ ಬಸ್‌ಗಳಿಂದಾಗುತ್ತಿರುವ ಅಪಘಾತಗಳು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಈ ಎಲೆಕ್ನಿಕ್ ಬಸ್‌ಗಳನ್ನು ಕೇಂದ್ರ ಸರ್ಕಾರದ ಸೂಚನೆಯಂತೆ ಖಾಸಗಿ ಕಂಪನಿಗಳು ಗುತ್ತಿಗೆ ಆಧಾರದಲ್ಲಿ ನಡೆಸುತ್ತಿವೆ. ಚಾಲಕರ ನೇಮಕ ಮತ್ತು ಬಸ್ ನಿರ್ವಹಣೆಯೂ ಅವರ ಜವಾಬ್ದಾರಿ. ಹೀಗಾಗಿ ಅಪಘಾತ ಸಂಭವಿಸಿದಾಗ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ. ಜೊತೆಗೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಬಸ್‌ಗಳಲ್ಲಿ ತಾಂತ್ರಿಕ ದೋಷಗಳು ಮತ್ತು ಬ್ಯಾಟರಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಎಂದಿದ್ದಾರೆ. ಇವಿ ಬಸ್‌ಗಳು ದಿನಕ್ಕೆ 200 ಕಿಲೋಮೀಟರ್ ಓಡಬೇಕು ಎಂಬ ನಿಯಮ ಇದ್ದರೂ, ಈಗ 100 ರಿಂದ 120 ಕಿಲೋಮೀಟರ್ ಮಾತ್ರ ಓಡುತ್ತಿವೆ. ಬ್ಯಾಟರಿ ಚಾರ್ಜ್ ಕಡಿಮೆಯಾಗುವುದು ಮತ್ತು ಪದೇ ಪದೇ ಬಸ್‌ಗಳು ಕೆಟ್ಟು ನಿಲ್ಲುವುದು ಬಿಎಂಟಿಸಿ ಕಾರ್ಯಾಚರಣೆಗೆ ತೊಂದರೆ ಉಂಟುಮಾಡುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಐದು-ಆರು ತಿಂಗಳ ಹಿಂದೆ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೆ. 45 ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ಸಿಕ್ಕಿತ್ತು. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ಮತ್ತೆ ಎರಡನೇ ಪತ್ರ ಬರೆದು ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.