2026-07-23 05:23:39

RAM MANDIR temple funds | ದೇಗುಲದ ಹಣ ಕದ್ದರೂ ನಾಚಿಕೆಯಾಗೋಲ್ವಾ? ಹೈಕೋರ್ಟ್ ಕಳವಳ | SNK

RAM MANDIR temple funds | ದೇಗುಲದ ಹಣ ಕದ್ದರೂ ನಾಚಿಕೆಯಾಗೋಲ್ವಾ? ಹೈಕೋರ್ಟ್ ಕಳವಳ | SNK

ಪ್ರಯಾಗ್‌ರಾಜ್: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಸಂಗ್ರಹವಾದ ಕಾಣಿಕೆ ಹಣದ ಅಕ್ರಮ ಹಾಗೂ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಅತ್ಯಂತ ಕಠಿಣ ಮಾತುಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. "ಅಯೋಧ್ಯೆಯ ರಾಮ ಮಂದಿರದಲ್ಲೇ ಕಾಣಿಕೆ ಹಣ ಕಳವಾಗಿದ್ದರೂ ಚಕಾರವೆತ್ತದೆ ಸುಮ್ಮನಿರುವ ಜನರನ್ನು ಯಾವುದೂ ನಾಚಿಕೆಪಡಿಸಲು ಸಾಧ್ಯವಿಲ್ಲ. ಇದು ಭಾರತೀಯರ ಪ್ರಾಮಾಣಿಕತೆಯು ಅಧೋಗತಿಗೆ ತಲುಪಿರುವುದರ ಸಂಕೇತ" ಎಂದು ನ್ಯಾಯಮೂರ್ತಿ ಅತುಲ್ ಶ್ರೀಧರನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ದೇಶವನ್ನು ಕಬಳಿಸುತ್ತಿರುವ ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡಲು 'ಭ್ರಷ್ಟಾಚಾರ ತಡೆ ಕಾಯ್ದೆ-1988'ಕ್ಕೆ ತಿದ್ದುಪಡಿ ತಂದು, ಭ್ರಷ್ಟಾಚಾರಿಗಳಿಗೆ ಮರಣದಂಡನೆ ವಿಧಿಸುವಂತಹ ಕಠಿಣ ಶಿಕ್ಷೆಯನ್ನು ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಭ್ರಷ್ಟಾಚಾರದ ಅಧೋಗತಿ: 'ಬುಲ್ಡೋಜರ್ ನ್ಯಾಯ' ಹಾಗೂ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಚಾಟಿ ಅಕ್ರಮ ಕಟ್ಟಡಗಳ ತೆರವು ಹಾಗೂ ಆರೋಪಿಗಳ ಮನೆಗಳ ಮೇಲೆ ರಾಜ್ಯ ಸರ್ಕಾರ ನಡೆಸುತ್ತಿರುವ 'ಬುಲ್ಡೋಜರ್ ನ್ಯಾಯ'ಕ್ಕೆ ಸಂಬಂಧಿಸಿದಂತೆ ನೀಡಲಾದ 51 ಪುಟಗಳ ಭಿನ್ನ ಅಭಿಪ್ರಾಯದ ತೀರ್ಪಿನಲ್ಲಿ ನ್ಯಾಯಮೂರ್ತಿಗಳು ದೇಶದ ಇಡೀ ವ್ಯವಸ್ಥೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಸಾರ್ವಜನಿಕರ ಮೌನಕ್ಕೆ ಕಳವಳ: ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ 2025ರ ವರದಿಯಲ್ಲಿ 182 ದೇಶಗಳ ಪೈಕಿ ಭಾರತ 91 ನೇ ಸ್ಥಾನದಲ್ಲಿದ್ದರೂ ನಮಗೆ ನಾಚಿಕೆಯಾಗುತ್ತಿಲ್ಲ. ಭ್ರಷ್ಟಾಚಾರವನ್ನು ಭಾರತೀಯರು ತಮ್ಮ ದೈನಂದಿನ ಜೀವನದಲ್ಲಿ ಸಹಜ ಎಂದು ಒಪ್ಪಿಕೊಂಡಿದ್ದಾರೆ. ಸಿಕ್ಕಿಬೀಳುವವರೆಗೂ ತಪ್ಪು ಮಾಡುವುದು ತಪ್ಪೇ ಅಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಪೀಠ ವಿಷಾದಿಸಿದೆ.

ಅಕ್ರಮ ನಿರ್ಮಾಣಕ್ಕೆ ಅಧಿಕಾರಿಗಳೇ ಹೊಣೆ: ರಾತ್ರೋರಾತ್ರಿ ಯಾವುದೇ ಕಟ್ಟಡಗಳು ಎದ್ದುನಿಮ್ಮುವುದಿಲ್ಲ. ರಾಜಕೀಯ ಬೆಂಬಲ ಅಥವಾ ಭ್ರಷ್ಟ ಅಧಿಕಾರಿಗಳು ಲಂಚ ಪಡೆದು ಕಣ್ಣುಮುಚ್ಚಿ ಕುಳಿತುಕೊಳ್ಳುವುದರಿಂದಲೇ ಇಂತಹ ಅಕ್ರಮ ನಿರ್ಮಾಣಗಳು ರೂಪುಗೊಳ್ಳುತ್ತವೆ. ದಶಕಗಳ ನಂತರ ಸಾರ್ವಜನಿಕರನ್ನು ದಿಢೀರನೆ ರಸ್ತೆಗೆ ತಳ್ಳುವ ಸರ್ಕಾರಿ ಯಂತ್ರಾಂಗವೇ ಈ ಅಪರಾಧದ ಬಹುದೊಡ್ಡ ಪಾಲುದಾರ (Accomplice) ಎಂದು ಕೋರ್ಟ್ ನೇರ ಆರೋಪ ಮಾಡಿದೆ.

'ಭ್ರಷ್ಟರಿಗೆ ಗಲ್ಲು ಶಿಕ್ಷೆ ಜಾರಿಯಾಗಲಿ, ಇಲ್ಲವಾದರೆ ನಾಗರಿಕ ದಂಗೆ ಗ್ಯಾರಂಟಿ'
ಸುಪ್ರೀಂ ಕೋರ್ಟ್‌ನ ಸ್ಪಷ್ಟ ಆದೇಶಗಳಿದ್ದರೂ ಕಾನೂನನ್ನು ಗಾಳಿಗೆ ತೂರಿ ನಡೆಸಲಾಗುತ್ತಿರುವ ಬುಲ್ಡೋಜರ್ ಕಾರ್ಯಾಚರಣೆಗಳನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಇಂತಹ ಕ್ರಮಗಳು ಕೇವಲ ಸಮಾಜದ ರಕ್ತಪಿಪಾಸು ಮನಸ್ಥಿತಿಯನ್ನು ತೃಪ್ತಿಪಡಿಸಲು ಮಾತ್ರ ಬಳಕೆಯಾಗುತ್ತಿವೆ ಎಂದಿದ್ದಾರೆ.

"ಸರ್ಕಾರಕ್ಕೆ ದೇಶದಿಂದ ಭ್ರಷ್ಟಾಚಾರವನ್ನು ತೊಲಗಿಸಲು ಹಾಗೂ ಪ್ರಾಮಾಣಿಕತೆಯನ್ನು ಮರುಸ್ಥಾಪಿಸಲು ನಿಜವಾಗಿಯೂ ಆಸಕ್ತಿ ಇದ್ದರೆ, ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿ ತಂದು ಅಪರಾಧಿಗಳಿಗೆ 'ಮರಣದಂಡನೆ' ವಿಧಿಸುವ ಕಾನೂನು ತರಬೇಕು. ಭ್ರಷ್ಟಾಚಾರದಿಂದಾಗಿ ಸಂಪತ್ತು ಕೆಲವೇ ಜನರ ಕೈಯಲ್ಲಿ ಕ್ರೋಢೀಕರಣಗೊಂಡು ಬಡವ-ಬಲ್ಲಿದರ ನಡುವಿನ ಕಂದಕ ಹೆಚ್ಚಾಗುತ್ತಿದೆ. ಇದು ಮುಂಬರುವ ದಿನಗಳಲ್ಲಿ ದೇಶದಲ್ಲಿ ದೊಡ್ಡ 'ನಾಗರಿಕ ದಂಗೆಗೆ' ದಾರಿ ಮಾಡಿಕೊಡಲಿದೆ ಎಂದು ನ್ಯಾಯಮೂರ್ತಿ ಅತುಲ್ ಶ್ರೀಧರನ್ ಹೇಳಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.