2026-06-08 01:19:47

Question paper leak NEET exam | ಪ್ರಶ್ನೆ ಪತ್ರಿಕೆ ಸೋರಿಕೆ ನೀಟ್ ಪರೀಕ್ಷೆ ರದ್ದು ಸಿಬಿಐ ತನಿಖೆ | Speed News Kannada

Question paper leak NEET exam  | ಪ್ರಶ್ನೆ ಪತ್ರಿಕೆ ಸೋರಿಕೆ ನೀಟ್ ಪರೀಕ್ಷೆ ರದ್ದು ಸಿಬಿಐ ತನಿಖೆ | Speed News Kannada

ನವದೆಹಲಿ, ಮೇ 12- ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್ ಯುಜಿ) ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ಈ ಹಗರಣದ ಆಳ ಮತ್ತು ವಿಸ್ತಾರವನ್ನು ಪತ್ತೆ ಹಚ್ಚಲು ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಈ ಬೆಳವಣಿಗೆಯು ದೊಡ್ಡ ಪರಿಣಾಮ ಬೀರಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಶೀಘ್ರದಲ್ಲೇ ಮರುಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಲಿದೆ. ಹೊಸದಾಗಿ ಅಭ್ಯರ್ಥಿಗಳು ಯಾವುದೇ ನೊಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಈ ಹಿಂದೆ ಪರೀಕ್ಷೆ ಬರೆದವರಿಗೆ ಪುನಃ ಅವಕಾಶ ನೀಡಲಾಗುತ್ತದೆ ಎಂದು ಎನ್‌ಟಿಎ ಸ್ಪಷ್ಟಪಿಸಿದೆ. ಪರೀಕ್ಷೆಗಿಂತ ಮೊದಲು ವಿತರಿಸಲಾದ ಮಾದರಿ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳು ಅಸಲಿ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳಿಗೆ ಹೋಲಿಕೆಯಾಗುತ್ತದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕೆಲವು ವಿದ್ಯಾರ್ಥಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಈ ವರ್ಷದ ನೀಟ್ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಮೇ 3 ರಂದು ದೇಶದಾದ್ಯಂತ 22.79 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಎದುರಿಸಿದ್ದರು. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ತನಿಖೆಯನ್ನು ಆರಂಭಿಸಿತ್ತು.
ನೀಟ್ ಯುಜಿಗೂ ಮೊದಲು ವಿತರಿಸಲಾದ ಕೆಲವು ಪ್ರಶ್ನೆಪತ್ರಿಕೆಗಳ ಸೆಟ್‌ಗಳು ಅಸಲಿ ಪ್ರಶ್ನೆಪತ್ರಿಕೆಯೊಂದಿಗೆ ಸಾಮ್ಯತೆ ಹೊಂದಿರುವ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡಬೇಕೆಂದು ಎನ್‌ಟಿಎ ಮನವಿ ಮಾಡಿತ್ತು. ಪರೀಕ್ಷೆಗೆ ಕೆಲವು ದಿನಗಳ ಮೊದಲು ಸುಮಾರು 400 ಪ್ರಶ್ನೆಗಳಿರುವ ಪ್ರತಿಗಳನ್ನು ವಿತರಿಸಲಾಗಿತ್ತು. ಇದರಲ್ಲಿ ಜೀವವಿಜ್ಞಾನ ಮತ್ತು ರಸಾಯನ ವಿಜ್ಞಾನದ 100 ಕ್ಕೂ ಹೆಚ್ಚು ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳಿಗೆ ಸಾಕಷ್ಟು ಹೋಲಿಕೆ ಬಂದಿದ್ದವು. ಅಧಿಕಾರಿಗಳು ಇದನ್ನು ಗೆಸ್ ಪೇಪರ್ ಅಥವಾ ಕೋಚಿಂಗ್ ಸ್ಟೈಲ್ ಟೆಸ್ಟ್ ಸರಣಿ ಎಂದು ಸಮರ್ಥನೆ ಮಾಡಿಕೊಂಡಿದ್ದರಾದರೂ ಅಕ್ರಮ ನಡೆದಿದೆ ಎಂಬ ಆರೋಪ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಂದ ಕೇಳಿಬಂದಿತ್ತು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಪರೀಕ್ಷೆಯ ಪಾವಿತ್ರ್ಯವನ್ನು ಕಾಪಾಡುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆರಂಭದಲ್ಲಿ ಇವುಗಳನ್ನು ಕೇವಲ ವದಂತಿ ಎಂದು ಪರಿಗಣಿಸಲಾಗಿದ್ದರೂ, ಕಾನೂನು ಜಾರಿ ಸಂಸ್ಥೆಗಳು ಮತ್ತು ಗುಪ್ತಚರ ಇಲಾಖೆಗಳು ನೀಡಿದ ಪ್ರಾಥಮಿಕ ವರದಿಗಳು ಪರೀಕ್ಷಾ ಪ್ರಕ್ರಿಯೆಯಲ್ಲಿ ಲೋಪದೋಷಗಳು ಉಂಟಾಗಿರುವುದನ್ನು ದೃಢಪಡಿಸಿವೆ. ವಿಶೇಷವಾಗಿ ಗೆಸ್ ಪೇಪರ್ ಹೆಸರಿನಲ್ಲಿ ಪ್ರಶ್ನೆಗಳು ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಎನ್‌ಟಿಎ ಸಂಸ್ಥೆಯು ತನ್ನ ಬಳಿ ಇರುವ ಎಲ್ಲಾ ದತ್ತಾಂಶಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಅಭ್ಯರ್ಥಿಗಳ ವಿವರಗಳನ್ನು ತನಿಖಾ ಸಂಸ್ಥೆಗೆ ಹಸ್ತಾಂತರಿಸಲು ಒಪ್ಪಿಕೊಂಡಿದೆ. ಕೇಂದ್ರ ಸರ್ಕಾರವು ಪರೀಕ್ಷೆಗೂ ಮುನ್ನ ಆಪಾದಿತ ಗೆಸ್ ಪತ್ರಿಕೆ ಹೇಗೆ ಪ್ರಸಾರವಾಯಿತು ಮತ್ತು ಇದರ ಹಿಂದೆ ಸಂಘಟಿತ ದುಷ್ಕೃತ್ಯ ನಡೆದಿದೆಯೇ ಎಂಬುದನ್ನು ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದೆ. ತನಿಖೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳು, ಡೇಟಾ ಮತ್ತು ಸಾಮಗ್ರಿಗಳನ್ನು ಹಂಚಿಕೊಳ್ಳುವ ಮೂಲಕ ಸಂಪೂರ್ಣವಾಗಿ ಸಹಕರಿಸುವುದಾಗಿ ಎನ್‌ಟಿಎ ಹೇಳಿದೆ. ಶುಲ್ಕ ಪಾವತಿ ಬೇಡ :
ಪರೀಕ್ಷೆ ರದ್ದಾಗಿರುವುದರಿಂದ ಆತಂಕಕ್ಕೊಳಗಾಗಿರುವ ವಿದ್ಯಾರ್ಥಿಗಳಿಗೆ ಎನ್‌ಟಿಎ ಕೆಲವು ಮುಖ್ಯ ಮಾಹಿತಿಗಳನ್ನು ನೀಡಿದೆ. ಮರುಪರೀಕ್ಷೆಗಾಗಿ ವಿದ್ಯಾರ್ಥಿಗಳು ಮತ್ತೆ ಯಾವುದೇ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಮೊದಲೇ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳ ವಿವರಗಳನ್ನು ಮುಂದಿನ ಪರೀಕ್ಷೆಗೆ ಬಳಸಿಕೊಳ್ಳಲಾಗುತ್ತದೆ. ಅಲ್ಲದೆ ವಿದ್ಯಾರ್ಥಿಗಳು ಮರುಪರೀಕ್ಷೆಗಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಈಗಾಗಲೇ ಪಾವತಿಸಿರುವ ಶುಲ್ಕವನ್ನು ಮರುಪಾವತಿ ಮಾಡುವ ಅಥವಾ ಹೊಂದಾಣಿಕೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಹಳೆಯ ಪರೀಕ್ಷಾ ಕೇಂದ್ರಗಳೇ ಬಹುತೇಕವಾಗಿ ಮುಂದುವರಿಯಲಿದ್ದು, ಹೊಸ ಪ್ರವೇಶ ಪತ್ರಗಳನ್ನು ಪರೀಕ್ಷೆಗಿಂತ ಕೆಲವು ದಿನಗಳ ಮೊದಲು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಎನ್‌ಟಿಎ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಐಟಿ 45 ಜನರನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದೆ. ಪ್ರತೀ ವರ್ಷ ಎನ್‌ಟಿಎ ದೇಶದಾದ್ಯಂತ ವೈದ್ಯಕೀಯ ಹೋಮಿಯೋಪತಿ, ದಂತ ವೈದ್ಯಕೀಯ, ಆಯುರ್ವೇದಿಕ್ ಕೋರ್ಸ್‌ಗಳಿಗೆ ನೀಟ್ ಪರೀಕ್ಷೆಯನ್ನು ನಡೆಸುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಎಂಬಿಬಿಎಸ್ ವಿದ್ಯಾರ್ಥಿಯನ್ನು ರಾಜಸ್ಥಾನ ವಿಶೇಷ ತನಿಖಾ ತಂಡ ಬಂಧಿಸಿದೆ. ಈತನೇ ಪ್ರಶ್ನೆಪತ್ರಿಕೆ ಸೋರಿಕೆಯ ಕಿಂಗ್‌ಪಿನ್ ಎಂದು ಹೇಳಲಾಗುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.