ಬೆಂಗಳೂರು: ವಿಧಾನ ಪರಿಷತ್ ನ ಏಳು ಸ್ಥಾನಗಳ ಪೈಕಿ ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂದು ಕಾಂಗ್ರೆಸ್ ಗೆ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಈ ಸಂಬಂಧ ಪ್ರಕಟಣೆ ನೀಡಿರುವ ಒಕ್ಕೂಟ ರಾಜ್ಯಸಭೆಗೆ ಕರ್ನಾಟಕದಿಂದ ನಾಲ್ಕು ಹಾಗೂ ವಿಧಾನ ಪರಿಷತ್ ನ ಏಳು ಸ್ಥಾನಗಳಿಗೆ ಜೂನ್ 18 ರಂದು ಮತದಾನ ನಡೆಯಲಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸುಲಭವಾಗಿ ನಾಲ್ಕು ಸ್ಥಾನಗಳನ್ನು ಗೆಲ್ಲಲಿದೆ. ಇದರಲ್ಲಿ ಕನಿಷ್ಠ ಎರಡು ಹಾಗೂ ಒಂದು ರಾಜ್ಯ ಸಭಾ ಸ್ಥಾನವನ್ನು ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ಬಿಟ್ಟುಕೊಡಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಗ್ರಹಪಡಿಸಿದೆ.
ವಿಧಾನ ಪರಿಷತ್ ನಲ್ಲಿರುವ ಒಟ್ಟು 75 ಸ್ಥಾನಗಳ ಪೈಕಿ ರಾಜ್ಯದ ಮುಸಲ್ಮಾನರ 13% ಜನಸಂಖ್ಯೆಗೆ ಹೋಲಿಸಿದರೆ ಕನಿಷ್ಠ 9 ರಿಂದ 10 ಮುಸ್ಲಿಮ್ ವಿಧಾನ ಪರಿಷತ್ ಸದಸ್ಯರು ಇರಬೇಕಿತ್ತು. ಆದರೆ ಈಗಿರುವುದು ಕೇವಲ 4 ವಿಧಾನ ಪರಿಷತ್ ಸದಸ್ಯರು. ಅಂದರೆ ಸೂಕ್ತ ಪ್ರಾತಿನಿಧ್ಯದ ಅರ್ಧಕ್ಕಿಂತಲೂ ಕಡಿಮೆ ಇದೆ ಎಂದರು.
ಒಟ್ಟು 12 ರಾಜ್ಯಸಭಾ ಸದಸ್ಯರ ಪೈಕಿ ಒಬ್ಬರು ಮಾತ್ರ ಮುಸ್ಲಿಮರಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಕನಿಷ್ಠ ಇಬ್ಬರು ಲೋಕಸಭಾ ಸದಸ್ಯರು ಮುಸ್ಲಿಮ್ ಸಮುದಾಯದಿಂದ ಇರುತ್ತಿದ್ದರು. ಆದರೆ ಈಗ ಮುಸ್ಲಿಮ್ ಸಮುದಾಯದಿಂದ ಒಬ್ಬರೂ ಲೋಕಸಭಾ ಸದಸ್ಯರಿಲ್ಲ. ಕಾಂಗ್ರೆಸ್ ನಿಂದ ಮುಸ್ಲಿಮರಿಗೆ ಕೊಡುವ ಲೋಕಸಭಾ ಟಿಕೆಟ್ ಸಂಖ್ಯೆಯೇ ಒಂದಕ್ಕೆ ಇಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವಲ್ಲಿ ಮುಸ್ಲಿಮ್ ಸಮುದಾಯ ನಿರ್ಣಾಯಕ ಪಾತ್ರ ವಹಿಸಿದೆ. ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ಹಾಕಿದೆ. ಬೇರೆ ಯಾವುದೇ ಸಮುದಾಯಕ್ಕೆ ಹೋಲಿಸಿದರೆ ಮುಸ್ಲಿಮ್ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ಮತ ಚಲಾಯಿಸಿದೆ. ಆದ್ದರಿಂದ ಈ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಗ್ರಹಪಡಿಸಿದೆ.