ಬೆಂಗಳೂರು: ರಾಜ್ಯದಲ್ಲಿ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲೆ ಸರ್ಕಾರ ಶೇಕಡಾ 50 ರಷ್ಟು ಭರ್ಜರಿ ರಿಯಾಯಿತಿ ಘೋಷಿಸಿದೆ. ಈ ನಿಯಮದ ಬಗ್ಗೆ ಸ್ವತಃ ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಈಗ ಅವರದೇ ಅಧಿಕೃತ ಕಾರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಚಿವರ ಕಾರಿಗೆ ಸಂಚಾರ ಪೊಲೀಸರು ದಂಡ ವಿಧಿಸಿರುವ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಈಗ ಸಚಿವರ ಕಾಲೆಳೆದಿದೆ.
ಪ್ರಿಯಾಂಕ್ ಖರ್ಗೆ ಅವರ ಅಧಿಕೃತ ಕಾರು ಎನ್ನಲಾದ 'KA42 GA 0099' ಸಂಖ್ಯೆಯ ವಾಹನದ ಇ-ಚಲನ್ ವಿವರಗಳನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಸಂಚಾರ ಪೊಲೀಸರ ಕ್ಯಾಮೆರಾಗಳಲ್ಲಿ ಈ ವಾಹನವು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸಿರುವುದು ಮತ್ತು ಸೀಟ್ ಬೆಲ್ಟ್ ಧರಿಸದೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿರುವುದು ಪತ್ತೆಯಾಗಿದೆ. ಸದ್ಯ ಈ ಕಾರಿನ ಹೆಸರಿನಲ್ಲಿ ಒಟ್ಟು ನಾಲ್ಕು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಒಟ್ಟು 2,500 ರೂಪಾಯಿ ದಂಡ ಬಾಕಿ ಇದೆ ಎಂದು ಬಿಜೆಪಿ ಆರೋಪಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿ, ಸಂಚಾರ ನಿಯಮಗಳು ಕೇವಲ ರಸ್ತೆಯ ಮೇಲಿನ ಗೆರೆಗಳಲ್ಲ, ಅವು ಪ್ರತಿಯೊಬ್ಬರ ಜೀವನಾಡಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಈ ಪೋಸ್ಟ್ ಗೆ ತಿರುಗೇಟು ನೀಡಿರುವ ಬಿಜೆಪಿ, ಸಾರ್ವಜನಿಕರಿಗೆ ಬುದ್ದಿ ಹೇಳುವ ಸಚಿವರಿಗೆ ಸೀಟ್ ಬೆಲ್ಟ್ ಧರಿಸುವ ಮತ್ತು ವೇಗದ ಮಿತಿ ಪಾಲಿಸುವ ನಿಯಮಗಳು ಅನ್ವಯಿಸುವುದಿಲ್ಲವೇ ಎಂದು ವ್ಯಂಗ್ಯವಾಡಿದೆ. ರಾಜ್ಯ ಸರ್ಕಾರವು ಜೂನ್ 21 ರಿಂದ ಜುಲೈ 10 ರವರೆಗೆ ಸಂಚಾರ ದಂಡ ಪಾವತಿಗೆ ಶೇಕಡಾ 50 ರಷ್ಟು ರಿಯಾಯಿತಿ ನೀಡಿರುವುದರಿಂದ, ಸಚಿವರು ತಕ್ಷಣವೇ ಕೆಎಸ್‌ಪಿ ಆಪ್, ಆಸ್ಟ್ರೇಂ ಆಪ್ ಅಥವಾ ಕರ್ನಾಟಕ ಒನ್ ಮೂಲಕ ಈ ಆಫರ್ ಬಳಸಿ ತಮ್ಮ ಬಾಕಿ ದಂಡವನ್ನು ಪಾವತಿಸಲಿ ಎಂದು ಬಿಜೆಪಿ ಲೇವಡಿ ಮಾಡಿದೆ. ಸಾರ್ವಜನಿಕರಿಗೆ ನಿಯಮ ಪಾಲಿಸುವಂತೆ ಕರೆ ನೀಡುವ ಸರ್ಕಾರಿ ಪ್ರತಿನಿಧಿಗಳೇ ಈ ರೀತಿ ನಿಯಮ ಉಲ್ಲೇಖ ಮಾಡಿರುವುದು ಸಾರ್ವಜನಿಕ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.