ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ಅಗಲಿಕೆಯಿಂದಾಗಿ ಇಡೀ ದೊಡ್ಡಗೌಡರ ಕುಟುಂಬವು ತೀವ್ರ ಶೋಕದಲ್ಲಿ ಮುಳುಗಿದೆ. ಈ ನಡುವೆ, ಸದ್ಯ ಜೈಲುವಾಸ ಅನುಭವಿಸುತ್ತಿರುವ ಅವರ ಮೊಮ್ಮಗ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಅಜ್ಜಿಯ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಲು ಮತ್ತು ಕೊನೆಯ ದರ್ಶನ ಪಡೆಯಲು ತುರ್ತು ಪೆರೋಲ್ ಕೋರಿ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹದಲ್ಲಿರುವ ಪ್ರಜ್ವಲ್ ರೇವಣ್ಣ, ತಮ್ಮ ವಕೀಲರ ಮುಖಾಂತರ ಜೈಲಿನ ಮುಖ್ಯ ಅಧೀಕ್ಷಕರಿಗೆ ಈ ಅರ್ಜಿಯನ್ನು ತಲುಪಿಸಿದ್ದಾರೆ. ಕಾನೂನಿನ ಪ್ರಕಾರ, ರಕ್ತಸಂಬಂಧಿಕರು ಅಥವಾ ಕುಟುಂಬದ ಹಿರಿಯರು ನಿಧನರಾದಾಗ ಕೈದಿಗಳಿಗೆ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ವಿಶೇಷ ಪೆರೋಲ್ ಪಡೆಯುವ ಅವಕಾಶವಿದ್ದು, ಅದರ ಅಡಿಯಲ್ಲೇ ಈ ಮನವಿ ಮಾಡಿಕೊಳ್ಳಲಾಗಿದೆ.
ಸದ್ಯ ಪ್ರಜ್ವಲ್ ಸಲ್ಲಿಸಿರುವ ಈ ಅರ್ಜಿಯನ್ನು ಜೈಲಾಧಿಕಾರಿಗಳು ಕಾನೂನು ತಜ್ಞರು ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ಹೈಪ್ರೊಫೈಲ್ ಕೈದಿಯಾಗಿರುವುದರಿಂದ, ಅವರಿಗೆ ಪೆರೋಲ್ ನೀಡಿದರೆ ಒದಗಿಸಬೇಕಾದ ಬಿಗಿ ಪೊಲೀಸ್ ಭದ್ರತೆ ಹಾಗೂ ಸುರಕ್ಷತಾ ನಿಯಮಗಳ ಬಗ್ಗೆ ಗಂಭೀರವಾಗಿ ಯೋಚಿಸಲಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರು ಈ ಅರ್ಜಿಯ ಮೇಲಿನ ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಸುದೀರ್ಘ ರಾಜಕೀಯ ಬದುಕಿನ ಏಳುಬೀಳುಗಳಲ್ಲಿ ಸದಾ ಮೌನವಾಗಿ, ಗಟ್ಟಿಯಾಗಿ ಬೆಂಬಲಕ್ಕೆ ನಿಂತಿದ್ದ ಚೆನ್ನಮ್ಮ ಅವರ ನಿಧನವು ಕುಟುಂಬಕ್ಕೆ ಭರಿಸಲಾಗದ ನಷ್ಟ ಉಂಟುಮಾಡಿದೆ. ಜೈಲಿನಲ್ಲಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಜೈಲಾಧಿಕಾರಿಗಳು ಅನುಮತಿ ನೀಡುತ್ತಾರಾ ಅಥವಾ ಅರ್ಜಿ ತಿರಸ್ಕೃತಗೊಳ್ಳುತ್ತಾ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ.