ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಹಾಸನ ಜಿಲ್ಲೆಯಾದ್ಯಂತ ತೀವ್ರ ಸಂತಾಪ ವ್ಯಕ್ತವಾಗಿದೆ. ಬೆಂಗಳೂರಿನಿಂದ ಹೊಳನರಸೀಪುರಕ್ಕೆ ಕೊಂಡೊಯ್ಯಲಾಗುತ್ತಿರುವ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಹಾಸನ ನಗರದಲ್ಲಿ ನೂರಾರು ಸಾರ್ವಜನಿಕರು ಹಾಗೂ ಅಭಿಮಾನಿಗಳು ಜಮಾಯಿಸಿದ್ದಾರೆ. ಈ ಸಂದರ್ಭದಲ್ಲಿ ಹಾಸನ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಅವರು ತಮ್ಮ ನೆಚ್ಚಿನ ನಾಯಕಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಲು ಸಜ್ಜಾಗಿದ್ದಾರೆ. ಸಾರ್ವಜನಿಕರ ದರ್ಶನದ ವೇಳೆ ಭಕ್ತಿಪೂರ್ವಕ ಪುಷ್ಪಾರ್ಚನೆ ನೆರವೇರಿಸಲು ಶಾಸಕರು ಬರೋಬ್ಬರಿ ಎರಡು ಟ್ರ್ಯಾಕ್ಟರ್‌ಗಳ ತುಂಬಾ ಬಗೆಬಗೆಯ ಹೂವುಗಳನ್ನು ತರಿಸಿದ್ದಾರೆ.
ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಜುಲೈ 18ರ ಶನಿವಾರ ಸಂಜೆ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದರು. ತಾಯಿಯ ಅಗಲಿಕೆಯಿಂದ ಹೆಚ್.ಡಿ. ರೇವಣ್ಣ ಹಾಗೂ ಇಡೀ ದೇವೇಗೌಡರ ಕುಟುಂಬಸ್ಥರು ಕಣ್ಣೀರು ಹಾಕಿದ್ದು, ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿರುವಂತೆ, ಸೋಮವಾರ ದೇವೇಗೌಡರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಲಿದೆ. ಸದ್ಯ ಹಾಸನ ಮಾರ್ಗವಾಗಿ ಸಾಗುತ್ತಿರುವ ಅಂತಿಮ ಯಾತ್ರೆಯಲ್ಲಿ ನಾಯಕರು ಹಾಗೂ ಸಾರ್ವಜನಿಕರು ತಾಯಿಗೆ ಅಶ್ರುತರ್ಪಣ ಸಲ್ಲಿಸುತ್ತಿದ್ದಾರೆ.