2026-07-20 01:30:20

Palani Murugan Temple | ಪಳನಿ ಮುರುಗನ್ ದೇವಸ್ಥಾನದ 100 ಕೋಟಿ ರೂ ಆಸ್ತಿ ಕೇವಲ 2 ಕೋಟಿಗೆ ಮಾರಾಟ ಸಬ್ ರಿಜಿಸ್ಟ್ರಾರ್ ಮನೆ ಮೇಲೆ ಸಿಬಿ ಸಿಐಡಿ ದಾಳಿ! | SNK

Palani Murugan Temple | ಪಳನಿ ಮುರುಗನ್ ದೇವಸ್ಥಾನದ 100 ಕೋಟಿ ರೂ ಆಸ್ತಿ ಕೇವಲ 2 ಕೋಟಿಗೆ ಮಾರಾಟ ಸಬ್ ರಿಜಿಸ್ಟ್ರಾರ್ ಮನೆ ಮೇಲೆ ಸಿಬಿ ಸಿಐಡಿ ದಾಳಿ! | SNK

ತಮಿಳ್ ನಾಡು: ಅಯೋಧ್ಯೆ ಸೇರಿದಂತೆ ಉತ್ತರ ಭಾರತದ ಹಲವು ಪ್ರಸಿದ್ಧ ದೇಗುಲಗಳಲ್ಲಿ ಭಾರೀ ಪ್ರಮಾಣದ ಹುಂಡಿ ಕಳವು ಪ್ರಕರಣಗಳು ಬಯಲಾದ ಬೆನ್ನಲ್ಲೇ, ದಕ್ಷಿಣ ಭಾರತದಲ್ಲೂ ಇಂತಹದ್ದೇ ಒಂದು ಆಘಾತಕಾರಿ ಹಗರಣ ಬೆಳಕಿಗೆ ಬಂದಿದೆ. ತಮಿಳುನಾಡಿನ ದಿಂಡಿಗಲ್‌ ಜಿಲ್ಲೆಯ ಪ್ರಸಿದ್ಧ ಪಳನಿಯ ಸ್ವಾಮಿ ಮುರುಗನ್ ದೇಗುಲಕ್ಕೆ ಸೇರಿದ ನೂರಾರು ಕೋಟಿ ಮೌಲ್ಯದ ಜಮೀನನ್ನೇ ಅಕ್ರಮವಾಗಿ ಮಾರಾಟ ಮಾಡಿರುವ ದಂಧೆ ತಡವಾಗಿ ಬಹಿರಂಗಗೊಂಡಿದೆ.

ದೇವಾಲಯಕ್ಕೆ ಸೇರಿದ ಅಂದಾಜು 100 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಕೇವಲ 2 ಕೋಟಿ ರೂಪಾಯಿಗೆ ಕಾನೂನುಬಾಹಿರವಾಗಿ ರಿಜಿಸ್ಟ್ರೇಷನ್ ಮಾಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮಹಾ ವಂಚನೆಗೆ ಸಂಬಂಧಿಸಿದಂತೆ ಸಬ್‌ ರಿಜಿಸ್ಟ್ರಾರ್‌ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಬ್ರೋಕರ್‌ಗಳ ಮನೆಗಳ ಮೇಲೆ ಶನಿವಾರ ಸಿಬಿ-ಸಿಐಡಿ ಅಧಿಕಾರಿಗಳು ಅದಿರು ದಾಳಿ ನಡೆಸಿದ್ದಾರೆ.

ರಾಜಕೀಯ ಆಕ್ರೋಶ: ಸಿಬಿ-ಸಿಐಡಿಗೆ ತನಿಖೆ ಮುಂದು ದೇವಸ್ಥಾನದ ಭೂಮಿಯನ್ನು ಕಬಳಿಸಿರುವ ಈ ಜಾಲದ ವಿರುದ್ಧ ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಆಕ್ರೋಶ ವ್ಯಕ್ತವಾಗಿದೆ. ಪ್ರತಿಪಕ್ಷಗಳು ಮತ್ತು ಭಕ್ತರು ಸರ್ಕಾರದ ವಿರುದ್ಧ ತಿರುಗಿಬೀಳುತ್ತಿದ್ದಂತೆ ಎಚ್ಚೆತ್ತ ಸರ್ಕಾರ, ಪ್ರಕರಣದ ತನಿಖೆಯನ್ನು ತಕ್ಷಣವೇ ಸಿಬಿ-ಸಿಐಡಿಗೆ ವರ್ಗಾಯಿಸಿ ಡಿಜಿಪಿ ಮೂಲಕ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಅಧಿಕಾರಿಗಳು ಈಗ ಅಕ್ರಮದ ಸುರುಳಿಯನ್ನು ಬಿಚ್ಚಿಡಲು ತನಿಖೆ ಚುರುಕುಗೊಳಿಸಿದ್ದಾರೆ.

ಡಿಎಂಕೆ ಅವಧಿಯ ಅಕ್ರಮಗಳ ವಿರುದ್ಧ ಸಚಿವರ ಕಿಡಿ ಈ ಕುರಿತು ಪ್ರತಿಕ್ರಿಯಿಸಿರುವ ಕಾನೂನು ಸಚಿವ ಸಿ.ಟಿ.ಆರ್‌. ನಿರ್ಮಲ್‌ ಕುಮಾರ್‌, "ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಇಂತಹ ಹತ್ತಾರು ಅಕ್ರಮಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ನಾವು ಈಗಾಗಲೇ ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದೇವೆ. ಕಳೆದ ಐದು ವರ್ಷಗಳಲ್ಲಿ ದೇವಸ್ಥಾನಗಳು, ಕೆರೆಗಳು ಹಾಗೂ ಜಲಮೂಲಗಳ ಸಮೀಪದ ಜಮೀನುಗಳನ್ನು ಹೇಗೆ ಅಕ್ರಮವಾಗಿ ನೋಂದಣಿ ಮಾಡಲಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ," ಎಂದಿದ್ದಾರೆ.

ಭಾಗಿಯಾದವರೆಲ್ಲರಿಗೂ ತಕ್ಕ ಶಾಸ್ತಿ: ಖಡಕ್ ಎಚ್ಚರಿಕೆ ಯಾರೆಲ್ಲಾ ಈ ಅಕ್ರಮ ಭೂ ನೋಂದಣಿ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿದ್ದಾರೋ, ಅವರೆಲ್ಲರನ್ನೂ ಕಾನೂನಿನ ಮುಂದೆ ತಂದು ಉತ್ತರದಾಯಿಯನ್ನಾಗಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಸಣ್ಣ ಸಿಬ್ಬಂದಿಯಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಯಾರನ್ನೂ ಬಿಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ವಂಚಕರಲ್ಲಿ ನಡುಕ ಶುರುವಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.