2026-06-08 04:55:16

ಸಿದ್ದರಾಮಯ್ಯ ಅವರಿಗೆ ಅಧಿಕಾರ, ಕುರ್ಚಿ ದೊಡ್ಡದಲ್ಲ;ದಿನೇಶ್‌ ಗುಂಡೂರಾವ್ | Speed News Kannada

 ಸಿದ್ದರಾಮಯ್ಯ ಅವರಿಗೆ ಅಧಿಕಾರ, ಕುರ್ಚಿ ದೊಡ್ಡದಲ್ಲ;ದಿನೇಶ್‌ ಗುಂಡೂರಾವ್ | Speed News Kannada

ಬೆಂಗಳೂರು: ರಾಜಕೀಯ ಸಿದ್ಧಾಂತಗಳ ಮೀರಿದ ಧೀಮಂತ ನಾಯಕ, ಶೋಷಿತರ ಮತ್ತು ಬಡವರ ಧ್ವನಿಯಾಗಿ ಸದಾ ಮಿಡಿಯುವ ಮಾನ್ಯ ಸಿದ್ದರಾಮಯ್ಯ ಅವರಿಗೆ ಅಧಿಕಾರವಾಗಲಿ, ಕುರ್ಚಿಯಾಗಲಿ ಎಂದಿಗೂ ದೊಡ್ಡದಲ್ಲ. ಹೈಕಮಾಂಡ್ ಹಾಗೂ ಪಕ್ಷದ ತೀರ್ಮಾನಕ್ಕೆ ಸಂಪೂರ್ಣ ಬದ್ಧರಾಗಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು, ಅವರು ಅಧಿಕಾರಕ್ಕೆ ಅಂಟಿಕೊಂಡ ನಾಯಕನಲ್ಲ, ಬದಲಿಗೆ ಪಕ್ಷದ ಶಿಸ್ತು ಮತ್ತು ಸಿದ್ಧಾಂತಕ್ಕೆ ತಲೆಬಾಗುವ ಧೀಮಂತ ವ್ಯಕ್ತಿತ್ವದವರು ಎಂಬುದು ಸಾಬೀತುಪಡಿಸಿದೆ ಎಂದು ಮಾಜಿ ಸಚಿವ ದಿನೇಶ್‌ ಗುಂಡೂರಾವ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಸಿದ್ದರಾಮಯ್ಯ ಅವರ ಅಂತಃಕರಣ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸ್ವತಃ ಬಡತನ ಮತ್ತು ಅನ್ನದ ಬೆಲೆಯನ್ನು ಹತ್ತಿರದಿಂದ ಅರಿತವರಾಗಿ, 'ಹಸಿವು ಮುಕ್ತ ಕರ್ನಾಟಕ'ದ ದೃಢ ಧ್ಯೇಯದೊಂದಿಗೆ ರಾಷ್ಟ್ರಾದ್ಯಂತ ಮಾದರಿಯಾದ 'ಅನ್ನಭಾಗ್ಯ' ಯೋಜನೆಯ ಮೂಲಕ ರಾಜ್ಯದ ಜನರ ಹೊಟ್ಟೆ ತಣಿಸಿ 'ಅನ್ನರಾಮಯ್ಯ' ಎಂದೇ ಜನರ ಹೃದಯದಲ್ಲಿ ನೆಲೆಯಾದವರು ಅವರು. ಹಿಂದೆ ನಾನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವನಾಗಿದ್ದಾಗ, ನನ್ನ ಮೇಲೆ ನಂಬಿಕೆಯಿಟ್ಟು ಈ ಐತಿಹಾಸಿಕ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ಸೌಭಾಗ್ಯವನ್ನು ಅವರು ನನಗೆ ನೀಡಿದ್ದರು.

ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆಗಳು ಸಕಾಲದಲ್ಲಿ ದೊರೆಯಬೇಕೆಂಬ ನಿಟ್ಟಿನಲ್ಲಿ, ದೇಶದಲ್ಲೇ ಪ್ರಪ್ರಥಮ ಬಾರಿಗೆ ನಮ್ಮ ಆರೋಗ್ಯ ಇಲಾಖೆ ತಂದ ಹೆಮ್ಮೆಯ '108 ಕೇಂದ್ರೀಕೃತ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್' ಅನ್ನು ಇತ್ತೀಚೆಗಷ್ಟೇ ಅವರು ಉದ್ಘಾಟಿಸಿದ್ದರು. ಅದುವೇ ಅವರು ಮುಖ್ಯಮಂತ್ರಿಯಾಗಿ ಭಾಗವಹಿಸಿದ ಕೊನೆಯ ಅಧಿಕೃತ ಸಾರ್ವಜನಿಕ ಕಾರ್ಯಕ್ರಮವಾಗಿತ್ತು ಎಂಬುದು ಈಗ ಭಾವನಾತ್ಮಕವಾಗಿ ಕಾಡುತ್ತಿದೆ. ಕೊನೆಯ ಕ್ಷಣದವರೆಗೂ ಜನಸಾಮಾನ್ಯರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಮಿಡಿದ ಅವರ ಆಡಳಿತ ಎಂದಿಗೂ ಸ್ಮರಣೀಯ.

ಕೋಮುವಾದಿಗಳ ವಿರುದ್ಧ ಎಂದೂ ರಾಜಿ ಮಾಡಿಕೊಳ್ಳದ ಅವರ ಗಟ್ಟಿ ನಿಲುವುಗಳು ಹಾಗೂ ಜನಾನುರಾಗಿಯಾಗಿ 'ಪಂಚ ಗ್ಯಾರಂಟಿ' ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕಾರ್ಯವೈಖರಿ, ಅವರ 'ನುಡಿದಂತೆ ನಡೆಯುವ' ಗುಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಿರೋಧಪಕ್ಷಗಳು ರಾಜಕೀಯ ದುರುದ್ದೇಶದಿಂದ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ಮಾಡುತ್ತಿರುವ ಆರೋಪಗಳೆಲ್ಲ ಕೇವಲ ಸತ್ಯಕ್ಕೆ ದೂರವಾದ ರಾಜಕೀಯ ಗಿಮಿಕ್ ಅಷ್ಟೇ ಹೊರತು ಅದರಲ್ಲಿ ಯಾವುದೇ ವಾಸ್ತವವಿಲ್ಲ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ನೈಜ ಸಮಾಜವಾದಿಯಾಗಿ ಬದುಕಿ ತೋರಿಸಿದ ಅವರ ನಡೆ ನಮಗೆಲ್ಲರಿಗೂ ಸದಾ ಮಾದರಿ.

ಕರ್ನಾಟಕದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ನ್ಯಾಯದ ಆಡಳಿತ ನಿರಂತರವಾಗಿ ಮುಂದುವರಿಯಬೇಕಾದರೆ ಮಾನ್ಯ ಸಿದ್ದರಾಮಯ್ಯ ಅವರು ರಾಜೀನಾಮೆಯ ನಂತರವೂ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಬೇಕು ಎಂಬುದು ನನ್ನ ಆಶಯವಾಗಿದೆ. ಇಂತಹ ಶ್ರೇಷ್ಠ ಜನನಾಯಕರೊಂದಿಗೆ ಕೆಲಸ ಮಾಡಲು ನನಗೆ ಸಿಕ್ಕ ಅವಕಾಶ ನನ್ನ ಸೌಭಾಗ್ಯ. ಆ ಒಡನಾಟ ಮತ್ತು ಮಾರ್ಗದರ್ಶನಕ್ಕಾಗಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾವು ಸದಾ ನಿಮ್ಮೊಂದಿಗಿದ್ದೇವೆ ಸರ್, ರಾಜ್ಯದ ಜನರಿಗಾಗಿ ನಿಮ್ಮ ಸೇವೆ ಹೀಗೇ ಮುಂದುವರಿಯಲಿ ಎಂದಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.