ಆಕ್ಲೆಂಡ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (FTA) ದ್ವಿಪಕ್ಷೀಯ ಬಾಂಧವ್ಯದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಕಳೆದ 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲ್ಯಾಂಡ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ಈ ಭೇಟಿಯು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಹೊಸ ವೇಗ ಮತ್ತು ಬಲವನ್ನು ನೀಡಿದೆ ಎಂದು ಅವರು ಹೇಳಿದ್ದಾರೆ. ನ್ಯೂಜಿಲ್ಯಾಂಡ್‌ನ ಆಕ್ಲೆಂಡ್‌ನಲ್ಲಿ ನಡೆದ ಉನ್ನತ ಮಟ್ಟದ ನಿಯೋಗದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ಈ ಮಹತ್ವದ ಒಪ್ಪಂದವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನ್ಯೂಜಿಲ್ಯಾಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಮತ್ತು ಅವರ ಸರ್ಕಾರಕ್ಕೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು. ನ್ಯೂಜಿಲ್ಯಾಂಡ್‌ನ ಆರ್ಥಿಕ ರಾಜಧಾನಿಯಲ್ಲಿ ಇಂತಹದೊಂದು ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಉಭಯ ದೇಶಗಳ ಸ್ನೇಹಕ್ಕೆ ಹೊಸ ಚೈತನ್ಯ ತುಂಬಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.
ಕಳೆದ ವರ್ಷ ಹೋಲಿ ಹಬ್ಬದ ಸಂದರ್ಭದಲ್ಲಿ ನ್ಯೂಜಿಲ್ಯಾಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ಭಾರತಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಆ ಭೇಟಿಯು ಹೋಲಿ ಹಬ್ಬದ ಬಣ್ಣಗಳಂತೆ ನಮ್ಮ ಬಾಂಧವ್ಯಕ್ಕೂ ಹೊಸ ರಂಗು ನೀಡಿತ್ತು ಎಂದರು. ಅಂದು ಆರಂಭವಾದ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಇಂದು ಯಶಸ್ಸಿನ ಮುಖ ಕಂಡಿವೆ. ನ್ಯೂಜಿಲ್ಯಾಂಡ್‌ನ ಇಡೀ ಸರ್ಕಾರ ಒಂದಾಗಿ ಇಷ್ಟು ಕಡಿಮೆ ಅವಧಿಯಲ್ಲಿ ಈ ಒಪ್ಪಂದವನ್ನು ಸಾಕಾರಗೊಳಿಸಿರುವುದು ಜಾಗತಿಕ ಮಟ್ಟದಲ್ಲೇ ಒಂದು ಅಪರೂಪದ ಸಾಧನೆಯಾಗಿದೆ ಎಂದು ಅವರು ಶ್ಲಾಘಿಸಿದರು. ಮುಕ್ತ ವ್ಯಾಪಾರ ಒಪ್ಪಂದದ ಮೂಲಕ ಭಾರತ ಮತ್ತು ನ್ಯೂಜಿಲ್ಯಾಂಡ್ ದೇಶಗಳು ಈಗ ವ್ಯೂಹಾತ್ಮಕ ಪಾಲುದಾರಿಕೆಗೆ (ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್) ಒಳಪಟ್ಟಿವೆ. ಈ ಮೈಲಿಗಲ್ಲು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ವಿಶ್ವಾಸ ಮತ್ತು ಉತ್ಸಾಹದೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಮಗೆ ಪ್ರೇರಣೆ ನೀಡುತ್ತದೆ. ಪ್ರಜಾಪ್ರಭುತ್ವದ ಸಮಾನ ಮೌಲ್ಯಗಳನ್ನು ಹೊಂದಿರುವ ಉಭಯ ದೇಶಗಳು ನೈಸರ್ಗಿಕ ಪಾಲುದಾರರಾಗಿದ್ದು, ಇಂಡೋ-ಪೆಸಿಫಿಕ್ ವಲಯದ ಕಡಲ ಭದ್ರತೆಯಲ್ಲಿ ಒಟ್ಟಾಗಿ ಕೆಲಸ ಮಾಡುವುದು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಜನಕಲ್ಯಾಣಕ್ಕೆ ದಾರಿಯಾಗಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಈ ಐತಿಹಾಸಿಕ ಒಪ್ಪಂದದಿಂದಾಗಿ ಉಭಯ ದೇಶಗಳ ಉದ್ಯಮಿಗಳು, ರೈತರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಮಹಿಳಾ ಉದ್ಯಮಿಗಳು ಹಾಗೂ ಪ್ರಮುಖವಾಗಿ ಉನ್ನತ ಶಿಕ್ಷಣ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಮತ್ತು ನುರಿತ ವೃತ್ತಿಪರರಿಗೆ ಹೆಚ್ಚಿನ ಉದ್ಯೋಗ ಹಾಗೂ ವ್ಯಾಪಾರ ಅವಕಾಶಗಳು ಮುಕ್ತವಾಗಲಿವೆ.