ನವದೆಹಲಿ: ಇರಾನ್ ಇರಾಕ್ ಯುದ್ಧದಿಂದ ಉಂಟಾಗಿರುವ ತೈಲ ಬಿಕ್ಕಟ್ಟಿನ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಐದು ರಾಷ್ಟ್ರಗಳ ವಿದೇಶ ಪ್ರವಾಸಕೆ ತೆರಳಲಿದ್ದಾರೆ. 15ರಿಂದ 20ರವರೆಗೆ ಯುಎಇ, ನೆದರ್ಲೆಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷದಿಂದಾಗಿ ಜಾಗತಿಕ ತೈಲ ಪೂರೈಕೆಗೆಅಡ್ಡಿಯಾಗಿದೆ. ಜಾಗತಿಕ ಅಸ್ಥಿರತೆಯ ಮಧ್ಯೆ ದೇಶದ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪ್ರಧಾನಿ ಮೋದಿ ಅವರ ಈ ಪ್ರವಾಸವು ಹೆಚ್ಚಿನ ಮಹತ್ವ ಗಿಟ್ಟಿಸಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ..
ದೇಶದಲ್ಲಿ ಇಂಧನ ಭದ್ರತೆಗಾಗಿ ಹಲವು ಕ್ರಮಗಳನ್ನು ಅನುಸರಿಸುವಂತೆ ಪ್ರಧಾನಿ ಮೋದಿ ಈಗಾಗಲೇದೇಶದ ಜನತೆಗೆ ಮನವಿ ಮಾಡಿದ್ದಾರೆ. ಇಂಧನ ಬಳಕೆ ಉಳಿತಾಯ, ಸಾರ್ವಜನಿಕ ಸಾರಿಗೆ ಬಳಕೆ, ವರ್ಕ್ ಫ್ರಂ ಹೋಮ್, ಚಿನ್ನ ಖರೀದಿ ಮಾಡದಿರುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿದ್ದಾರೆ.
ಮುಖ್ಯವಾಗಿ ಮೋದಿ ಅವರು ಸಂಯುಕ್ತ ಅರಬ್ ಒಕ್ಕೂಟದ (ಯುಎಇ) ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಒಪೆಕ್‌ನಿಂದ ಯುಎಇ ನಿರ್ಗಮಿಸಿದೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಇಂಧನ ಖರೀದಿ ಸಂಬಂಧ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಎಇ, ಭಾರತದ ಮೂರನೇ ಅತಿದೊಡ್ಡ ವ್ಯಾಪಾರಿ ಪಾಲುದಾರ ರಾಷ್ಟ್ರವಾಗಿದೆ ಎನ್ನುವುದು ಇಲ್ಲಿ ಗಮನಾರ್ಹ ಅಂಶ.