ಬೆಂಗಳೂರು : ಬೆಂಗಳೂರಿನ ಮೇಲಿರುವ ಜನಸಂಖ್ಯೆ ಹಾಗೂ ಭಾರಿ ಸಂಚಾರ ದಟ್ಟಣೆಯ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.
ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಿ ಯೋಜನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ರೈತರಲ್ಲಿ ಯಾವುದೇ ಗೊಂದಲವಿಲ್ಲದೆ, ಅವರ ಸಂಪೂರ್ಣ ಒಪ್ಪಿಗೆಯನ್ನು ಪಡೆದು ಮಾತ್ರ ಈ ಉಪನಗರವನ್ನು ನಿರ್ಮಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಲ್ಲಿ ಮಾತಾಡಿದ ಅವರು, ಜಮೀನು ಕಳೆದುಕೊಳ್ಳುವ ರೈತರಿಗೆ ಈಗಾಗಲೇ ನಿಗದಿಪಡಿಸಿರುವ ಭೂಮಿ ಪರಿಹಾರದ ಮೊತ್ತ ಸಾಕಾಗುತ್ತಿಲ್ಲ ಎಂಬ ದೂರುಗಳಿದ್ದರೆ, ಅದನ್ನು ಇನ್ನೊಮ್ಮೆ ಪರಿಶೀಲಿಸಲು ಸರ್ಕಾರ ಸಿದ್ಧವಿದೆ. ರೈತರು ಹೆಚ್ಚಿನ ಪರಿಹಾರವನ್ನು ಅಪೇಕ್ಷಿಸಿದರೆ, ಅದನ್ನು ನ್ಯಾಯಯುತವಾಗಿ ನೀಡುವ ಕೆಲಸ ಮಾಡಲಾಗುವುದು. ರೈತರ ಹಿತರಕ್ಷಣೆಯೊಂದಿಗೆ ಸುಸೂತ್ರವಾಗಿ ಯೋಜನೆ ಅನುಷ್ಠಾನಗೊಳಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಇನ್ನು ಬಿಡದಿಯಲ್ಲಿ ಕೇವಲ AI ಹಬ್‌ಗಾಗಿಯೇ ಈ ಟೌನ್‌ಶಿಪ್ ಮಾಡುತ್ತಿಲ್ಲ. ಸದ್ಯದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಿಸಲು ಬಿಡದಿ, ತುಮಕೂರು ಹಾಗೂ ಕೋಲಾರದಂತಹ ಹತ್ತಿರದ ಪಟ್ಟಣಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ. ಈ ಉಪನಗರಗಳು ಅಭಿವೃದ್ಧಿಯಾದರೆ ರಾಜಧಾನಿ ಬೆಂಗಳೂರಿನ ಮೇಲಿನ ಪ್ರೆಷರ್ ಗಣನೀಯವಾಗಿ ಕಡಿಮೆಯಾಗಲಿದ್ದು, ನಗರದ ಸದ್ಯದ ಪರಿಸ್ಥಿತಿ ಸುಧಾರಿಸಲಿದೆ ಎಂದು ತಿಳಿಸಿದರು.
ನಿರುದ್ಯೋಗ ಯುವಕ ಯುವತಿಯರಿಗೆ ಗುಡ್ ನ್ಯೂಸ್..!
ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗಾಗಿ ಕಾಯುತ್ತಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ಡಿಸಿಎಂ ಪರಂ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ.
ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹಂತ ಹಂತವಾಗಿ ಹುದ್ದೆಗಳನ್ನು ತುಂಬುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 72,000 ಸರ್ಕಾರಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಜಸ್ಟಿಸ್ ನಾಗಮೋಹನ್ ದಾಸ್ ನೇತೃತ್ವದ ಸಮಿತಿಯ ವರದಿ ಆಧರಿಸಿ ಕೇವಲ 24,000 ಹುದ್ದೆಗಳನ್ನು ತುಂಬಲು ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಮುಖ್ಯಮಂತ್ರಿಗಳ ಬದಲಾವಣೆಯ ಬಳಿಕ ಯೋಜನೆಯನ್ನು ಪುನರ್ ಪರಿಶೀಲಿಸಿ ಹುದ್ದೆಗಳ ಸಂಖ್ಯೆಯನ್ನು 72 ಸಾವಿರಕ್ಕೆ ಹೆಚ್ಚಿಸಲಾಗಿದೆ. ಶಿಕ್ಷಕರು, ವೈದ್ಯರು ಹಾಗೂ ಇಂಜಿನಿಯರ್‌ಗಳು ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ನೋಟಿಫಿಕೇಶನ್ ಹೊರಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ವೇಗವಾಗಿ ಮತ್ತು ವ್ಯವಸ್ಥಿತವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಈಗಾಗಲೇ ಇಬ್ಬರು ಹಿರಿಯ ಅಧಿಕಾರಿಗಳನ್ನು ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ. ಉನ್ನತ ಅಧಿಕಾರಿಗಳಾದ ಉಮಾ ಮಹದೇವನ್ ಹಾಗೂ ಗೌರವ್ ಗುಪ್ತ ಅವರು ಇಡೀ ನೇಮಕಾತಿಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಲಕ್ಷಾಂತರ ನಿರುದ್ಯೋಗಿ ಯುವಕರ ಸತತ ಮನವಿಗೆ ಸ್ಪಂದಿಸಿರುವ ಸರ್ಕಾರ, ಈ ಮಹತ್ವದ ನಿರ್ಧಾರದ ಮೂಲಕ ಉದ್ಯೋಗದ ಆಶಾಕಿರಣ ಮೂಡಿಸಿದೆ.