ವಿಶ್ವದ ಪ್ರಮುಖ ಸಾಫ್ಟ್ವೇರ್ ಕಂಪನಿಗಳಲ್ಲಿ ಒಂದಾದ ಒರೇಕಲ್ ತನ್ನ ಉದ್ಯೋಗಿಗಳ ಸಂಖ್ಯೆಗೆ ಭಾರೀ ಕತ್ತರಿ ಹಾಕಿದೆ. ಜಾಗತಿಕವಾಗಿ 30,000 ಉದ್ಯೋಗಿಗಳನ್ನು ಒರೇಕಲ್ ಲೇ ಆಫ್ ಮಾಡಿದೆ. ಭಾರತವೊಂದರಲ್ಲೇ 12,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಭಾರತದಲ್ಲಿ ಒರೇಕಲ್ ಕಂಪನಿ 30,000 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ 12,000 ಮಂದಿ ಎಂದರೆ ಶೇ. 40ರಷ್ಟು ಲೇ ಆಫ್ ಆದಂತಾಗುತ್ತದೆ. ಯಾವ ಪೂರ್ವಸೂಚನೆ ಇಲ್ಲದೆ, ರಾತ್ರೋರಾತ್ರಿ ಕೆಲಸ ಕಳೆದುಕೊಂಡ ಅನೇಕರು ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಕಂಪನಿಯಲ್ಲಿ ಲೇ ಆಫ್ ಮಾಡುವಾಗ ಸಾಮಾನ್ಯವಾಗಿ ಅದರ ಸುಳಿವನ್ನು ಮುಂಚಿತವಾಗಿ ನೀಡಲಾಗಿರುತ್ತದೆ. ಲೇ ಆಫ್ ಮಾಡಿದಾಗ ಫೋನ್ ಮಾಡಿಯೋ, ಮೀಟಿಂಗ್ ಮಾಡಿಯೋ ಅಥವಾ ಎಚ್ಆರ್ ಕರೆಸಿಯೋ ತಿಳಿಸುವುದುಂಟು. ಆದರೆ, ಒರೇಕಲ್ ಉದ್ಯೋಗಿಗಳಿಗೆ ಒಂದು ಇಮೇಲ್ನಲ್ಲಿ ಲೇ ಆಫ್ ನೋಟೀಸ್ ಬಂದಿತಂತೆ.