ನವದೆಹಲಿ: ಲೋಕಸಭಾಧ್ಯಕ್ಷ ಸ್ಥಾನದಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ಪ್ರತಿಪಕ್ಷಗಳು ನೋಟಿಸ್ ನೀಡಿವೆ. ಇವರನ್ನು ಪದಚ್ಯುತಗೊಳಿಸುವ ನೋಟಿಸ್‌ಗೆ 119 ಸಂಸದರು ಸಹಿ ಹಾಕಿದ್ದಾರೆ. ಸಂಸತ್ ನಿಯಮಗಳ ಪ್ರಕಾರ ನೋಟಿಸ್ ಸಲ್ಲಿಸಿದ 14 ದಿನಗಳ ನಂತರ ಚರ್ಚೆಗೆ ಬರಲಿದೆ. ನೋಟಿಸ್ ಪುರಸ್ಕೃತವಾದ ಬಳಿಕವಷ್ಟೇ ಲೋಕಸಭೆಯಲ್ಲಿ ಚರ್ಚೆಗೆ ಬರಲಿದೆ. ಕಾಂಗ್ರೆಸ್ ಉಪನಾಯಕ ಗೌರವ್ ಗೊಗೋಯ್ ಅವರು ಸಂವಿಧಾನದ 94ಸಿ ವಿಧಿಯಡಿ ನೋಟಿಸ್ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಟಿಎಂಸಿ ಸಂಸದರು ನೋಟಿಸ್ ಗೆ ಸಹಿ ಹಾಕದೆ ದೂರ ಉಳಿದಿದ್ದಾರೆ. ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಬೆಂಬಲಿಸುವುದಾಗಿ ಟಿಎಂಸಿ ಸಂಸದರೊಬ್ಬರು ತಿಳಿಸಿದ್ದಾರೆ.
ನಾಲ್ಕನೇ ಬಾರಿಗೆ ಸ್ಪೀಕರ್ ಅವರನ್ನು ಪದ್ಮಚುತಗೊಳಿಸಬೇಕು ಎಂದು ನೋಟಿಸ್ ಸಲ್ಲಿಕೆಯಾಗಿದೆ. ಈ ಹಿಂದೆ 1954ರಲ್ಲಿ ಜಿ.ವಿ ಮಾವಳಂಕರ್ ಹಾಗೂ 1987ರಲ್ಲಿ ಬಲರಾಮ್ ಜಾಖಡ್ ಅವರನ್ನು ಸ್ಪೀಕರ್ ಹುದ್ದೆಯಿಂದ ಪದಚ್ಯುತಗೊಳಿಸಬೇಕು ಎಂದು ನೋಟಿಸ್ ನೀಡಲಾಗಿತ್ತು. ಆದರೆ ಎರಡಕ್ಕೂ ಸೋಲಾಗಿತ್ತು. 1966ರಲ್ಲಿ ಹುಕ್ಕಂ ಸಿಂಗ್ ಅವರ ವಿರುದ್ಧ ನೀಡಿದ್ದ ನೋಟಿಸ್‌ನಲ್ಲಿ ಕನಿಷ್ಠ 50 ಸಂಸದರ ಹೆಸರಿಲ್ಲದ ಕಾರಣ ಆ ನಿಲುವಳಿ ತಿರಸ್ಕೃತವಾಗಿತ್ತು.