ಕರಾಚಿ: ಆಫ್ಘಾನಿಸ್ತಾನದ ವಿರುದ್ಧ ನೇರ ಯುದ್ಧ ಘೋಷಿಸಿರುವ ಪಾಕಿಸ್ತಾನ ತನ್ನ ಕಾರ್ಯಾಚರಣೆಗೆ 'ಆಪರೇಶನ್ ಘಜಬ್ ಲಿಲ್-ಹಕ್' ಎಂದಯ ನಾಮಕರಣ ಮಾಡಿದೆ. ಇತ್ತೀಚೆಗೆ ಆಫ್ಘಾನಿಸ್ತಾನ ಹಾಗೂ ಪಾಕ್ ನ ಗಡಿ ಭಾಗದಲ್ಲಿ ಉಂಟಾದ ಭಾರೀ ಉದ್ವಿಗ್ನತೆ, ಗಡಿ ದಾಳಿ ಮತ್ತು ಉಗ್ರ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪಾಕಿಸ್ತಾನ ಸೈನ್ಯ ತಿಳಿಸಿದೆ. "ಘಜಬ್ ಲಿಲ್-ಹಕ್" ಎಂಬ ಪದಕ್ಕೆ "ಸತ್ಯಕ್ಕಾಗಿ ಕ್ರೋಧ" ಎಂಬ ಅರ್ಥವಿದ್ದು, ರಾಷ್ಟ್ರ ಭದ್ರತೆ ಕಾಪಾಡಲು ತೀವ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ.
ಗಡಿಯಾಚೆಯಿಂದ ಪಾಕಿಸ್ತಾನಿ ಸೇನಾ ಕ್ಯಾಂಪ್ ಗಳು ಹಾಗೂ ಪೋಸ್ಟ್ಗಳ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ವಾಯು ದಾಳಿ ಮತ್ತು ಭೂ ದಾಳಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಗಡಿ ಭಾಗದಲ್ಲಿನ ಕೆಲವು ತಾಣಗಳನ್ನು ಗುರಿಯಾಗಿಸಿ ಯುದ್ಧವಿಮಾನಗಳು ಮತ್ತು ತೋಪು ದಾಳಿಗಳನ್ನು ನಡೆಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಈ ಕಾರ್ಯಾಚರಣೆಯಲ್ಲಿ ಐವತ್ತಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿದರೂ, ನಿಖರ ಸಂಖ್ಯೆಗಳ ಬಗ್ಗೆ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.
ಇದಕ್ಕೆ ಅಫ್ಘಾನಿಸ್ಥಾನದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಪಾಕಿಸ್ತಾನವು ತಮ್ಮ ಭೂಭಾಗದೊಳಗೆ ನುಗ್ಗಿ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಎರಡೂ ಬದಿಗಳ ಸೈನಿಕರು ಮತ್ತು ಕೆಲ ನಾಗರಿಕರು ಸಾವನ್ನಪ್ಪಿದ್ದಾರೆನ್ನಲಾಗಿದೆ. ಕೆಲವು ಗಡಿ ಪೋಸ್ಟ್ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಆಫ್ಘಾನಿಸ್ತಾನ ಹೇಳಿಕೆ ನೀಡಿದ್ದು, ಪಾಕಿಸ್ತಾನ ಅದನ್ನು ನಿರಾಕರಿಸಿದೆ. ಪಾಕ್ ಮತ್ತು ಆಫ್ಘಾನಿಸ್ತಾನದ ನಡುವಿನ ಈ ಸಂಘರ್ಷವು ದೀರ್ಘಕಾಲದಿಂದ ವಿವಾದದಲ್ಲಿರುವ ಡ್ಯುರಂಡ್ ಲೈನ್ ಗಡಿ ಸಮಸ್ಯೆಯ ಹಿನ್ನೆಲೆಯಲ್ಲಿಯೇ ನಡೆದಿದೆ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ನಡುವಿನ ಗಡಿಯ ವಿವಾದಕ್ಕೆ ಸುಧೀರ್ಘ ಇತಿಹಾಸವಿದ್ದು, ಇದೇ ಸಧ್ಯದ ಯುದ್ಧಕ್ಕೂ ಸಹ ಕಾರಣವಾಗಿದೆ. ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಗಡಿ ಭದ್ರತೆ ಮತ್ತು ಉಗ್ರ ಸಂಘಟನೆಗಳಿಗೆ ಆಶ್ರಯ ನೀಡುತ್ತಿರುವ ಕುರಿತು ಪರಸ್ಪರ ಆರೋಪಗಳು ಹೆಚ್ಚಾಗಿವೆ. ದುರ್ದೈವವಶಾತ್ ಎರಡೂ ದೇಶಗಳು ಹೇರಳವಾಗಿ ಉಗ್ರ ಸಂಘಟನೆಗಳಿಗೆ ಆಶ್ರಯ ನೀಡುತ್ತಿರುವ ಕುಖ್ಯಾತಿ ಹೊಂದಿದ್ದು, ಇಬ್ಬರ ಆರೋಪಗಳಲ್ಲಿಯೂ ಸತ್ಯವಿದೆ. ಪ್ರಸ್ತುತ ಪರಿಸ್ಥಿತಿಯಿಂದ ಗಡಿ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವ್ಯಾಪಾರ ಮತ್ತು ಸಂಚಾರ ವ್ಯವಸ್ಥೆಯ ಮೇಲೂ ಸಹ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಸಮುದಾಯಗಳು ಈ ಕುರಿತು ಎರಡೂ ದೇಶಗಳು ತಾಳ್ಮೆ ಪ್ರದರ್ಶಿಸಿ ಸಂವಾದದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕರೆ ನೀಡಿದೆ. ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡರೆ ಪ್ರಾದೇಶಿಕ ಭದ್ರತೆಗೆ ದೊಡ್ಡ ಸವಾಲಾಗುವ ಸಾಧ್ಯತೆ ಇದೆ ಎಂದು ಭದ್ರತಾವಲಯದ ತಜ್ಞರು ಎಚ್ಚರಿಕೆ ನೀಡಿದ್ದಾರೆ.